ಗಣೇಶನಿಗೆ ಮದ್ಯ, ಮಾಂಸ ನೈವೇದ್ಯ

Advertisement

ಅನಿಲ ಬಾಚನಹಳ್ಳಿ

ಕೊಪ್ಪಳ: ವಿಘ್ನ ವಿನಾಶಕನ ಪೂಜೆಗೆ ಮೊದಕ, ಹೊಳಿಗೆ, ಕಡಬುಗಳನ್ನು ನೈವೇದ್ಯ ಮಾಡುವುದು ಸಾಮಾನ್ಯ. ಆದರೆ ಕೆಲ ಕುಟುಂಬಗಳು ಮದ್ಯ, ಮಾಂಸವನ್ನು ತಯಾರಿಸುವ ಮೂಲಕ ಪೂಜೆ ಸಲ್ಲಿಸಿರುವುದು ವಿಶೇಷ.

ಸಮೀಪದ ಭಾಗ್ಯನಗರದ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದವರು ಗಣೇಶ ಚೌತಿಯ ಅಂಗವಾಗಿ ವಿಘ್ನೇಶ್ವರನ ಮೂರ್ತಿಗೆ ಮದ್ಯ ಮತ್ತು ಮಾಂಸದ ನೈವೇದ್ಯವನ್ನು ಅರ್ಪಿಸುವ ಸಂಪ್ರದಾಯವನ್ನು ಬಹಳಷ್ಟು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

ಪ್ರತಿವರ್ಷವೂ ಗಣೇಶ ಹಬ್ಬದ ನಿಮಿತ್ತ ವಿನಾಯಕನ ಮೂರ್ತಿಯ ವಿಸರ್ಜನೆ ಮಾಡುವ ಪೂರ್ವದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲರೂ ತರಹೇವಾರಿ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ, ಬಳಿಕ ಮನೆಯವರೆಲ್ಲರೂ ಸೇರಿ ಸಾಮೂಹಿಕ ಭೋಜನ ಮಾಡುತ್ತಾರೆ. ಆದರೆ ಇಲ್ಲಿನ ಕೆಲ ಕುಟುಂಬಗಳು ಮಾತ್ರ ಮದ್ಯ, ಮಾಂಸವನ್ನೇ ನೈವೇದ್ಯ ಮಾಡಿ, ಸಾಮೂಹಿಕ ಭೋಜನ ಮಾಡುವ ಸಂಪ್ರದಾಯವನ್ನು ಹೊಂದಿದ್ದಾರೆ.

ಕೆಂಪುಮುಖ ಗಣಪನಿಗೆ ಮಾತ್ರ ಅನ್ವಯ

ಮನೆಯಲ್ಲಿ ಕೂರಿಸುವ ಗಣೇಶನ ಮೂರ್ತಿಗಳು ಸಾಮಾನ್ಯವಾಗಿ ಬಿಳಿಬಣ್ಣ ಹಾಗೂ ಗುಲಾಬಿ ಬಣ್ಣದ ಮುಖವನ್ನು ಹೊಂದಿರುತ್ತವೆ. ಆದರೆ ಇಲ್ಲಿನ ಸಾವಜಿ ಕುಟುಂಬಗಳು ಕೆಂಪು ಮುಖದ ಗಣೇಶನ ಮೂರ್ತಿಯನ್ನು ಮನೆಯೊಳಗೆ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗಾಗಿ ಕೆಂಪು ಬಣ್ಣದ ಮುಖ ಹೊಂದಿದ ಗಣಪನಿಗೆ ಮಾತ್ರ ಮದ್ಯ ಮತ್ತು ಮಾಂಸ ನೈವೇದ್ಯ ಮಾಡಲಾಗುತ್ತದೆ. ಬಿಳಿ ಮುಖದ ಗಣೇಶನಿಗೆ ಮದ್ಯ, ಮಾಂಸದ ನೈವೇದ್ಯ ಮಾಡುವುದು ವಿರಳವಾಗಿದೆ.