ಗಡಿ ವಿವಾದ: ಉಭಯ ರಾಜ್ಯ ಸಿಎಂಗಳ ಜೊತೆ ಅಮಿತ್ ಶಾ ಸಭೆ

BASAVARAJ BOMAI
Advertisement

ಬೆಂಗಳೂರು : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಆರಂಭಿಸಿದ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳಲ್ಲಿ ಹಿಂಸಾಚಾರ ಆರಂಭವಾಗಲು ನೇರ ಕಾರಣವಾಗಿದೆ. ಆದರೆ, ಈಗ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗವು ಇಂದು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಹಿಂಸಾಚಾರ ತಡೆಯುವಂತೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಅಮಿತ್‌ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿ.14 ಅಥವಾ ಡಿ.15ರಂದು ಸಭೆ ನಡೆಸಲು ಮುಂದಾಗಿದ್ದಾರೆ. ಇದಕ್ಕಿಂತಲೂ ಮುಂಚಿತವಾಗಿ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಗೃಹಮಂತ್ರಿಗಳ ಮುಂದೆ ಚರ್ಚೆ ಮಾಡುವ ವೇಳೆ ಏನೆಲ್ಲಾ ವಿಚಾರಗಳನ್ನು ಮುಂದಿಡಬೇಕು ಎಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈಗ ಎರಡೂ ರಾಜ್ಯಗಳ ಗಡಿಗಳಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಗಡಿ ವಿಚಾರವಾಗಿ ಈವರೆಗೆ ಸಂಭವಿಸಿರುವ ವಸ್ತು ಸ್ಥಿತಿಯನ್ನು ಗೃಹ ಸಚಿವರಿಗೆ ವಿವರಿಸಲಿದ್ದಾರೆ. ಇದಾದ ನಂತರ, ಮುಖ್ಯಮಂತ್ರಿಗಳ ಸಭೆಯ ವೇಳೆ ಉಳಿದ ಮಾಹಿತಿಯನ್ನು ನಾನು ಅಮಿತ್‌ ಶಾ ಅವರ ಮುಂದಿಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೊರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.‌ ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.