ಹುಬ್ಬಳ್ಳಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ವಿಚಾರದ ಬಗ್ಗೆ ರಾಜ್ಯಪಾಲರು ಮಾತನಾಡಿದ್ದು ಏಕೆ? ಮಾತನಾಡಲು ಅವರಿಗೆ ಅಧಿಕಾರ ನೀಡಿದವರು ಯಾರು? ಎಂಬುದನ್ನು ಆಯಾ ಸರ್ಕಾರಗಳೇ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಗಡಿ ವಿಚಾರವಾಗಿ ಮಾತನಾಡುವುದು ತಪ್ಪು ಎಂದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರದ ವಾದವನ್ನು ತಿರಸ್ಕಿರಿಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ರಾಜ್ಯ ಸರ್ಕಾರ ಶೀಘ್ರವೇ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದರು.
ಗಡಿ ವಿಚಾರದಲ್ಲಿ ಎರಡೂ ರಾಜ್ಯಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ `ಮಹಾಜನ್’ ವರದಿಯಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಗಡಿ ವಿಚಾರ ರಾಜ್ಯದ ಹಿತಾಸಕ್ತಿಯ ವಿಷಯ. ಕಾಂಗ್ರೆಸ್ ಪಕ್ಷದ್ದು ಕರ್ನಾಟಕಕ್ಕೆ ಒಂದು ನಿಲುವು, ಮಹಾರಾಷ್ಟ್ರಕ್ಕೆ ಒಂದು ನಿಲುವು ಎಂಬುದೇನಿಲ್ಲ. ಯಾಕೆಂದರೆ ಇದು ಕಾಂಗ್ರೆಸ್ ಪಕ್ಷದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.