ಗಂಗೆಗೊಂದು ನಮಸ್ಕಾರ

ಗುರುಬೋಧೆ
Advertisement

ಲೋಕಪಾವನೆಯಾದ ಗಂಗೆಯನ್ನು ಪೂಜಿಸುವ ಗಂಗಾಷ್ಟಮಿ ಈ ದಿನ. ಭೂಮಿಯನ್ನು ಪೂಜಿಸದೆ ಯಾವ ಪೂಜೆಯೂ ಆರಂಭವಾಗುವುದಿಲ್ಲ. ಹಾಗೆಯೆ ಗಂಗೆಯನ್ನು ಪೂಜಿಸುವುದು ಎಲ್ಲಾ ಪೂಜೆಗಳ ಆರಂಭದಲ್ಲಿ ಇದ್ದೆ ಇರುತ್ತದೆ. ಯಾಕೆಂದರೆ ನೀರಿಲ್ಲದೆ ಪೂಜೆಯೆ ಆಗುವುದಿಲ್ಲ. ಎಲ್ಲಾ ನೀರನ್ನು ಗಂಗೆಯೆಂದು ಭಾವಿಸುವುದು ಭಾರತೀಯರ ರೂಢಿ. ಗೋದಾವರಿಯ ಉತ್ಸವಕ್ಕೆ ಗಂಗೆ ಬಂದೇ ಬರುತ್ತಾಳೆ ಎಂದು ಮಹಾರಾಷ್ಟ್ರದ ಆಸ್ತಿಕ ಜನ ಹೇಳುವುದನ್ನು ಕೇಳುತ್ತೇವೆ. ಹೀಗೆ ಬೇರೆ ಬೇರೆ ಮಹಾನದಿಗಳಲ್ಲಿಯೂ ಆಯಾ ನದಿದೇವತೆಗಳ ಉತ್ಸವಕ್ಕೆ ಗಂಗೆ ಬರುವ ಪ್ರಸಿದ್ಧಿಯಿದೆ. ಎಲ್ಲಾ ನೀರಿಗೆ ಗಂಗೆ ಸಂಬಂಧ ಎಂಬುದನ್ನು ಇದು ತೋರಿಸುತ್ತದೆ.
ಗಂಗೆಗೆ ತ್ರಿಮೂರ್ತಿಗಳ ಮತ್ತು ತ್ರಿಲೋಕಗಳ ಸಂಬಂಧವಿದೆ. ಬ್ರಹ್ಮನ ಕಮಂಡಲುವಿನಲ್ಲಿ ಇದ್ದ ಗಂಗೆಯನ್ನು ಬ್ರಹ್ಮನು ವಿಷ್ಣುವಿನ ಪಾದಗಳಿಗೆ ಅಭಿಷೇಕ ಮಾಡಿದನೆಂದು ಕಥೆಯಿದೆ. ಹೀಗೆ ವಿಷ್ಣುವಿನ ಪಾದದಲ್ಲಿ ಹುಟ್ಟಿದ ಗಂಗೆಯು ಭೂಮಿಗಿಳಿದು ಬರುವಾಗ ಶಿವನು ತನ್ನ ಜಟೆಯಲ್ಲಿ ಧರಿಸಿ ಭೂಮಿಗೆ ನಿಧಾನವಾಗಿ ಇಳಿದು ಬರುವಂತೆ ಮಾಡಿದನು.
ಶಿವನು ಹಾಗೆ ಮಾಡದಿದ್ದರೆ ಸುವರ್ಲೋಕದಿಂದ ಬೀಳುತ್ತಿರುವ ಗಂಗೆಯ ರಭಸವನ್ನು ಭೂಮಿಯು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೆಂದು ಭಾವುಕರು ಹೇಳುತ್ತಾರೆ. ಸುವರ್ಲೋಕದಿಂದ ಹೊರಟ ಗಂಗೆಯು ಭುವರ್ಲೋಕವನ್ನು (ಅಂತರಿಕ್ಷ ಲೋಕವನ್ನು) ದಾಟಿ ಬಂದಿದ್ದಾಳೆ. ಹೀಗೆ ತ್ರಿಮೂರ್ತಿಗಳ ಮತ್ತು ತ್ರಿಲೋಕಗಳ ಸಂಬಂಧ ಬೇರೆ ಯಾವ ಕಥೆಯಲ್ಲೂ ಬರುವುದಿಲ್ಲ.
ಗಂಗೆಯು ಪವಿತ್ರವೆಂದು ಭಾವಿಸಲು ವೈಜ್ಞಾನಿಕ ಕಾರಣಗಳು ಇವೆ. ಗಂಧಕದ ಅಂಶ ಗಂಗೆಯ ನೀರಿನಲ್ಲಿ ಹೆಚ್ಚು ಇರುತ್ತದೆ. ಹಿಮಾಲಯದ ಎತ್ತರದಿಂದ ಜಿಗಿದು ಬರುವ ಗಂಗೆಯ ಪ್ರವಾಹದ ವೇಗ ಬೇರೆ ಯಾವ ನದಿಗೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಗಂಗಾನದಿಗೆ ಅನೇಕ ಆಣೇಕಟ್ಟುಗಳನ್ನು ಕಟ್ಟಿರುವುದರಿಂದ ಈ ವೇಗಕ್ಕೆ ಒಂದಷ್ಟು ತಡೆ ಬಿದ್ದಿದೆ. ಗಂಗೆಯು ಶುದ್ಧವಾಗಿರಲು ಅದರ ವೇಗವೂ ಒಂದು ಕಾರಣ. ನದೀ ವೇಗೇನ ಶುದ್ಧ್ಯತಿ' ಎಂಬ ಮಾತು ಪ್ರಸಿದ್ಧವಾಗಿದೆ. ಗಂಗಾನದಿಗೆ ಇರುವ ವಿಶ್ವಮಾನ್ಯತೆ ಅದ್ಭುತವಾದದ್ದು. ಪ್ರಸಿದ್ಧ ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾಖಾನ್ಕಾಶಿಯಲ್ಲೆ ಗಂಗೆ ಇದ್ದಾಳೆ, ಪಾಕಿಸ್ತಾನದಲ್ಲಿ ಇಲ್ಲ.’ ಎಂದು ಹೇಳುವ ಮೂಲಕ ಆ ದೇಶದ ಆಮಂತ್ರಣವನ್ನು ನಿರಾಕರಿಸಿದರೆಂಬುದು ಪ್ರಸಿದ್ಧವಾಗಿದೆ. ಗ್ರೀಕ್ ದೇಶದ ತತ್ವಜ್ಞಾನಿ ಸಾಕ್ರೇಟಿಸ್ ಅಲೆಕ್ಝಾಂಡರನಿಗೆ ಭಾರತದಿಂದ ಗಂಗೆಯನ್ನು ತರಲು ಹೇಳಿದನೆಂಬುದು ಐತಿಹಾಸಿಕ ಸಂಗತಿ.
ಪ್ರತಿದಿನವೂ ಅನೇಕ ಲಕ್ಷಗಳಷ್ಟು ಜನ ಶ್ರದ್ಧೆಯಿಂದ ಸ್ನಾನ ಮಾಡುವ ನದಿ, ಕುಂಭಮೇಳದಲ್ಲಿ ಹತ್ತಾರು ಕೋಟಿ ಭಕ್ತರು ಸ್ನಾನ ಮಾಡುವ ನದಿ, ತನ್ನ ಮಡಿಲಿನ ಉದ್ದಕ್ಕೂ ಅನೇಕ ತೀರ್ಥಕ್ಷೇತ್ರಗಳನ್ನು ಹೊಂದಿರುವ ನದಿ ಗಂಗಾನದಿ ಮಾತ್ರ. ಇಂತಹ ಗಂಗಾ ನದಿ ಆಧುನಿಕ ಮಾನವನ ಅನೇಕ ಯೊಜನೆಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ದುರಂತದ ಸಂಗತಿ. ಸದ್ಯ ಗಂಗೆಗೆ ನಮಸ್ಕಾರ ಮಾಡುವುದೇ ನಮಗೆ ಗತಿ.