ಖಾನಾಪುರದಲ್ಲಿ ಹೊಲ-ಗದ್ದೆಗಳಿಗೆ ನುಗ್ಗಿದ ಕಾಡಾನೆ ಹಿಂಡು-ಬೆಳೆ ಹಾನಿ

Advertisement

ಬೆಳಗಾವಿ/ಖಾನಾಪುರ: ತಾಲ್ಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಶನಿವಾರ ನಸುಕಿನಜಾವ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಸಿದೆ. 4 ಮರಿಗಳನ್ನೊಳಗೊಂಡಂತೆ ಒಟ್ಟು 16 ಆನೆಗಳಿರುವ ಗಜಪಡೆ ಶುಕ್ರವಾರ ರಾತ್ರಿ ದಾಂಡೇಲಿ ಅರಣ್ಯದಿಂದ ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಆಗಮಿಸಿವೆ.
ಮಧ್ಯರಾತ್ರಿಯಿಂದ ಶನಿವಾರ ನಸುಕಿನ ಜಾವದವರೆಗೆ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಹೊರವಲಯದ ಕೃಷಿ ಭೂಮಿಗಳಿಗೆ ಲಗ್ಗೆ ಇಟ್ಟಿವೆ. ಹೊಲದಲ್ಲಿದ್ದ ಕಬ್ಬು ತುಳಿದು ತಿಂದಿರುವ ಆನೆಗಳು ಬಳಿಕ ಭತ್ತದ ಜಮೀನುಗಳಿಗೆ ನುಗ್ಗಿ ರಾಶಿ ಮಾಡಲು ಸಂಗ್ರಹಿಸಿ ಇಟ್ಟಿದ್ದ ಭತ್ತದ ಬಣಿವೆಯನ್ನು ಕಿತ್ತು ತುಳಿದಿವೆ. ಕಾಡಾನೆಗಳು ರೈತರ ಹೊಲಗಳಲ್ಲಿದ್ದ ಬಾಳೆ ಮತ್ತು ತೆಂಗಿನ ಗಿಡಗಳನ್ನು ಕಿತ್ತಿವೆ ಮತ್ತು ಇತರೆ ತೋಟಗಾರಿಕೆ ಬೆಳೆಗಳಿಗೂ ಸಹ ಹಾನಿ ಉಂಟು ಮಾಡಿವೆ ಎಂದು ರೈತರು ದೂರಿದ್ದಾರೆ.
ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ರೈತರಾದ ಹಣಮಂತ ಅಮರಾಪುರ, ತಿಮ್ಮಣ್ಣ ಅಮರಾಪುರ, ರಾಮ ಅಮರಾಪುರ, ಅನೋಹರ ಪಾಟೀಲ, ಮುರಳಿಧರ ಪಾಟೀಲ, ಅರ್ಜುನ ವಡ್ಡರ, ಗುಡೂಸಾಬ್ ಸಾಹುಕಾರ, ಮಾರುತಿ ಪಾಟೀಲ, ಕಲ್ಲಪ್ಪ ಪಾಟೀಲ ಮತ್ತು ಇತರೆ ರೈತರಿಗೆ ಸೇರಿದ 30 ಎಕರೆ ಪ್ರದೇಶದಲ್ಲಿ ಕಾಡಾನೆಗಳು ಸುತ್ತಾಡಿ ಬೆಳೆಹಾನಿ ಮಾಡಿವೆ. ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಶನಿವಾರ ಮುಂಜಾನೆ ಮಾಹಿತಿ ನೀಡಲಾಗಿದೆ. ಕೇವಲ ಅರಣ್ಯ ರಕ್ಷಕರೊಬ್ಬರು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, 2 ದಿನ ಕಚೇರಿಗೆ ರಜೆ ಇರುವ ಕಾರಣ ಸೋಮವಾರ ಮತ್ತೆ ಬರುವುದಾಗಿ ಹೇಳಿಹೋಗಿದ್ದಾರೆ.
ಮೇಲಧಿಕಾರಿಗಳು ಇತ್ತ ಗಮನಹರಿಸಿಲ್ಲ. ಕೂಡಲೇ ಆನೆಗಳಿಂದ ಹಾನಿಗೀಡಾದ ಪ್ರದೇಶದ ಪರಿಶೀಲನೆ ನಡೆಸಬೇಕು ಮತ್ತು ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಭೂರಣಕಿ ಗ್ರಾಮದ ಮಹೇಶ ಪಾಟೀಲ, ಎಂ.ಎಂ ಸಾಹುಕಾರ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.