ರಾಜ್ಯ ಕಾಂಗ್ರೆಸ್ನಲ್ಲಿ ಈವರೆಗೂ ಎರಡು ಬಣಗಳು ಮಾತ್ರ ಇದ್ದವು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೂರು ಬಣಗಳಾಗಿವೆ. ಈ ಹಿಂದೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷ ಕೇವಲ 80 ಸೀಟುಗಳನ್ನುಗಳಿಸಿ ಸೋತಿತ್ತು. ಎಐಸಿಸಿ ಅಧ್ಯಕ್ಷರಾದ ಮೇಲೆ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಮತ್ತೊಬ್ಬರ ಕೈಗೊಂಬೆಯಾಗಿ ಖರ್ಗೆ ಕೆಲಸ ಮಾಡುತ್ತಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವರಾಜ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ ಯಾವುದೇ ಗೊತ್ತು ಗುರಿ ಇಲ್ಲ. ಅವರು ಜನರ ಸಂಕಷ್ಟ ಅರಿತು, ಸ್ಪಂದಿಸಲು ಯಾತ್ರೆ ಮಾಡುತ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಾಗದು. ರಾಹುಲ್ ಯಾತ್ರೆ ನೋಡಿ, ಬಿಜೆಪಿ ಜನಸಂಕಲ್ಪ ಸಮಾವೇಶ ಮಾಡುತ್ತಿದೆ. ಅದರಲ್ಲಿ ಜನರಿಗಾಗಿ ಮಾಡಿದ ಕೆಲಸಗಳ ಬಗ್ಗೆ ಹೇಳುತ್ತಿಲ್ಲ. ಬಿಜೆಪಿಯವರದ್ದು ಪರ್ಸಂಟೇಜ್ ವ್ಯವಹಾರವಷ್ಟೇ. ಇದಕ್ಕೆ ಭಿನ್ನವಾಗಿ ಜೆಡಿಎಸ್ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳುತ್ತಿದ್ದೇವೆ. ಜನ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.