ಬೆಳಗಾವಿ: ಕಾರು ಖರೀದಿಸಿ ಮಾರಾಟ ಮಾಡಿ, ಅದೇ ಕಾರನ್ನು ಕಳ್ಳತನ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಔರಂಗಾಬಾದ್‌ನ ರವೀಂದ್ರ ದಾಮೋದರ ರಾಥೋಡ್(೩೩), ಮಂಜುನಾಥ ಮಡಕರಿ(೩೮), ಶಿವಪ್ರಸಾದ ಕೇರಿ(೨೭), ಸೋಮನಾಥ ಪಾಟೀಲ್(೨೪) ಬಂಧಿತ ಆರೋಪಿಗಳು.
ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ, ಗಡಹಿಂಗ್ಲಜ್‌ನಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದವನೇ ಪ್ರಕರಣದ ಕಿಂಗ್ ಪಿನ್ ಎಂದು ಗೊತ್ತಾಗಿದ್ದು, ಸಾರಿಗೆ ಇಲಾಖೆಯ ಕೆಲಸ ಕಳೆದುಕೊಂಡಿದ್ದ ಈತ ಹಳೆಯ ಕಾರುಗಳನ್ನು ಕೊಳ್ಳುವಿಕೆ ವ್ಯವಹಾರ ಪ್ರಾರಂಭಿಸಿದ್ದ. ಬೇರೆಯವರ ಕಾರುಗಳನ್ನು ತಾನು ನಡೆಸುವುದಾಗಿ ಹೇಳಿ ಅವುಗಳನ್ನು ಪಡೆದ ನಂತರ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರೆಲ್ಲಿದೆ ಎಂಬುದನ್ನು ಜಿಪಿಎಸ್ ಮೂಲಕ ಪತ್ತೆ ಹಚ್ಚಿ ಗಡಹಿಂಗ್ಲಜ್‌ನ ತನ್ನ ಮೂವರು ಸಹಚರರಿಗೆ ಅದು ಇರುವ ಸ್ಥಳ ತಿಳಿಸಿ ಕಳ್ಳತನ ಮಾಡಿಸಿ ಅದೇ ಕಾರನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.