ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆಂದು ಹೂಡಿಕೆ ಮಾಡಿಸಿ ೩ ಕೋ.ರೂ. ವಂಚಿಸಿರುವ ಬಗ್ಗೆ ಕಣ್ಣೂರು ಬೋರುಗುಡ್ಡೆಯ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಮ್ಮದ್ ಶಫದ್ ಸಿ.ಕೆ. ಮತ್ತು ಮಹಮ್ಮದ್ ಅಫೀದ್ ಸಿ.ಕೆ ವಂಚಿಸಿದ ಆರೋಪಿಗಳು. ದೂರುದಾರ ವ್ಯಕ್ತಿಗೆ ಅವರ ಪರಿಚಯದ ಮಹಮ್ಮದ್ ಶಫದ್ ೨೦೨೦ರ ಜನವರಿಯ ಮೊದಲ ವಾರದಲ್ಲಿ ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದಿಸಿದ್ದು ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸಿ ಎಂದಿದ್ದ. ಅದರಂತೆ ದೂರುದಾರರು ಮಹಮ್ಮದ್ ಸಫದ್‌ನನ್ನು ಭೇಟಿಯಾಗಿದ್ದರು. ಆಗ ಮಹಮ್ಮದ್ ಸಫದ್ ಲ್ಯಾಪ್‌ಟಾಪ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಮಾಹಿತಿ ನೀಡಿದ್ದ. ತಿಂಗಳಿಗೆ ಶೇ.೨೫ ಲಾಭಾಂಶ ನೀಡುವುದಾಗಿ ತಿಳಿಸಿದ್ದ. ಜನವರಿ ಮೂರನೇ ವಾರದಲ್ಲಿ ಮಹಮ್ಮದ್ ಶಫದ್ ಮತ್ತು ಆತನ ತಮ್ಮ ಮಹಮ್ಮದ್ ಅಫೀದ್ ದೂರುದಾರರ ಮನೆಗೆ ಭೇಟಿ ನೀಡಿದ್ದರು.
ಆ ವೇಳೆ ದೂರುದಾರರು ೩೫ ಲ.ರೂ. ನಗದನ್ನು ಆರೋಪಿಗಳಾದ ಮಹಮ್ಮದ್ ಶಫದ್ ಮತ್ತು ಮಹಮ್ಮದ್ ಅಫೀದ್‌ನಿಗೆ ನೀಡಿದ್ದರು. ಒಂದು ತಿಂಗಳ ಬಳಿಕ ಮಹಮ್ಮದ್ ಶಫದ್ ವಾಟ್ಸಪ್ ಮೂಲಕ ದೂರುದಾರರಿಗೆ ಒಂದು ತಿಂಗಳ ೮.೭೫ ಲ.ರೂ ಲಾಭಾಂಶ ಬಂದಿರುವುದಾಗಿ ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೋರಿಸಿದ್ದ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್‌ಡೇಟ್ ಆಗುತ್ತದೆ ಎಂದು ನಂಬಿಸಿದ್ದ. ಬಳಿಕ ಮತ್ತೆ ಕರೆ ಮಾಡಿ ಲಾಭಾಂಶದ ಬಗ್ಗೆ ನಂಬಿಸಿದ್ದ. ಜಾಸ್ಮಿನ್ ಹಂಸ ಎಂಬವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ ೭ ಲ.ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ. ದೂರುದಾರರು ತನ್ನ ಸ್ನೇಹಿತರಿಂದ ಸಂಗ್ರಹಿಸಿ ಆರೋಪಿಗಳಿಗೆ ಒಟ್ಟು ೩ ಕೋ.ರೂ. ನೀಡಿದ್ದರು. ಆದರೆ ಅನಂತರ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ೨೦೨೨ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮಹಮ್ಮದ್ ಶಫದ್ ಮತ್ತು ಮಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ದೂರುದಾರರಿಗೆ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಮಹಮ್ಮದ್ ಶಫದ್ ಸಿ.ಕೆ, ಮಹಮ್ಮದ್ ಅಫೀದ್ ಸಿ.ಕೆ., ಸಾದಿಕ್, ಜಾಸ್ಮಿನ್ ಮತ್ತು ಮಹಮ್ಮದ್ ಬಶೀರ್ ವಿರುದ್ಧ ದೂರು ದಾಖಲಾಗಿದ್ದು ಆರೋಪಿಗಳು ಸಂಚು ನಡೆಸಿ ಆಪ್ ಮೂಲಕ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ ಎಂದು ಮಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.