ಕೌನ್ ಬನೇಗಾ ಚೀಫ್ ಮಿನಿಸ್ಟರ್?

hegde sir
Advertisement

ಮೇ ೧೦ರಂದು ಈ ರಾಜ್ಯದ ಜನತೆ ತಮ್ಮ ಮುಂದಿನ ಸರ್ಕಾರದ ಆಯ್ಕೆಗಾಗಿ ಮತಗಟ್ಟೆಗೆ ತೆರಳಬೇಕು. ಆದರೆ ರಾಜ್ಯದ ಯಾರಿಗೂ ತಿಳಿಯದು, ಮುಂದೆ ನಮಗೆ ಆಡಳಿತ ನೀಡುವ ಈ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು !
ನಿಜ. ಇದು ಅಧ್ಯಕ್ಷೀಯ ಮಾದರಿ ಸರ್ಕಾರವಲ್ಲ. ಆದಾಗ್ಯೂ ಮುಖ್ಯಮಂತ್ರಿ ಅಥವಾ ಯಾರ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತದೆ ಎನ್ನುವ ಕನಿಷ್ಠ ಚಿತ್ರಣವಾದರೂ ಬೇಕು. ಇಂತಹ ಮಾಹಿತಿಯೇ ಮತದಾರನಿಗೆ ಇಲ್ಲದ ಪರಿಸ್ಥಿತಿಯನ್ನು ಕರುನಾಡ ಜನತೆ ಈ ಸಾರೆ ಶುಷ್ಕ ಮನಸ್ಸಿನಿಂದ ನೋಡುವಂತಾಗಿದೆ.
ಅಧ್ಯಕ್ಷೀಯ ಮಾದರಿಯಲ್ಲದ ಕಾರಣ ಚುನಾಯಿತ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆಂಬುದು ವಿದಿತವೇ. ಬಹುಮತ ಹೊಂದಿರುವ ಪಕ್ಷದ ಶಾಸಕರುಗಳು ಮತ್ತು ಪಕ್ಷದ ಮುಖಂಡರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಸಂವಿಧಾನದ ಮತ್ತು ನಾವು ಘೋಷಿಸಿಕೊಂಡ ಪ್ರಜಾಪ್ರಭುತ್ವದ ಮೂಲ ತತ್ವ ನಿಜ. ಆದರೆ ಯಾವ ರಾಜಕೀಯ ಪಕ್ಷವೇ ಆಗಿರಲಿ, ಎಲ್ಲ ಚುನಾವಣೆಗಳ ಪೂರ್ವದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಸ್ಪಷ್ಟ ಸೂಚನೆಯನ್ನಂತೂ ಮತದಾರನಿಗೆ ನೀಡಿಯೇ ಮತ ಯಾಚಿಸುವುದು ಬಹುತೇಕ ರೂಢಿಗತ. ಇದು ತಪ್ಪಿದ್ದು ಇದೇ ಸಾರೆ. ಅದಕ್ಕಾಗಿಯೇ ಮತದಾರನಿಗೆ ಗೊಂದಲ.
ಕಾಂಗ್ರೆಸ್ ಪಕ್ಷದಲ್ಲಿ ಯಾರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುತ್ತಾರೋ ಅವರೇ ಚುನಾಯಿತ ಸರ್ಕಾರದ (ಈ ಪಕ್ಷ ಗೆದ್ದರೆ) ಮುಖ್ಯಮಂತ್ರಿ ಆಗುತ್ತಿದ್ದುದು ಒಪ್ಪಿಕೊಂಡ ಸಂಪ್ರದಾಯ. ಮಧ್ಯಂತರ ಬದಲಾವಣೆ ಬೇರೆ. ಆದರೆ ಸಾರ್ವತ್ರಿಕ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಮತದಾರನಿಗೆ ಸ್ಪಷ್ಟವಾಗಿರುತ್ತಿದ್ದುದು ಕೆಪಿಸಿಸಿ ಅಧ್ಯಕ್ಷರೇ ಮುಂದಿನ ಮುಖ್ಯಮಂತ್ರಿ ಎನ್ನುವುದು.
ಇದು ೨೦೧೩ರವರೆಗೂ ನಡೆದುಕೊಂಡು ಬಂದಿದ್ದ ಪಕ್ಷ ಪರಂಪರೆ. ೨೦೧೩ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಸೋತರು. ಆಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಮತ್ತು ಅದಕ್ಕೂ ಪೂರ್ವ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈ ಒಂದು ಸಾರೆ ಬಿಟ್ಟರೆ, ನೇತೃತ್ವ ವಹಿಸಿದ್ದವರೇ ಮುಖ್ಯಮಂತ್ರಿಯಾಗುವುದು ಕಾಂಗ್ರೆಸ್‌ನಲ್ಲಿ ನಡೆದು ಬಂದಿತ್ತು. ಮಧ್ಯಂತರದಲ್ಲಿ ಸಿಎಂ ಆದವರ ವಿಷಯ ಬೇರೆ.
ವೀರೇಂದ್ರ ಪಾಟೀಲರು ಅನಾರೋಗ್ಯ ಕಾರಣದಿಂದ ಪದಚ್ಯುತಗೊಂಡಾಗ ಬಂಗಾರಪ್ಪ ಮುಖ್ಯಮಂತ್ರಿಯಾದದ್ದು ಹೈಕಮಾಂಡ್ ನೇಮಕದಿಂದ. ಆ ನಂತರದವರು ವೀರಪ್ಪ ಮೊಯಿಲಿ. ಅವರನ್ನು ಲಕೋಟೆ ಮೂಲಕ ಹೈಕಮಾಂಡ್ ನೇಮಕ ಮಾಡಿತ್ತು.
ತದನಂತರದಲ್ಲಿ ಎಸ್.ಎಂ.ಕೃಷ್ಣರನ್ನು ಪಾಂಚಜನ್ಯವೇ ಮುಖ್ಯಮಂತ್ರಿ ಗಾದಿಗೆ ಏರಿಸಿತು. ಆಗಲೂ ಚುನಾವಣೆ ಪೂರ್ವವೇ ಕೃಷ್ಣ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿ ಘೋಷಿತವಾಗಿತ್ತು.
ಜನತಾ ರಂಗ ಸಾಮೂಹಿಕ ನಾಯಕತ್ವ ಘೋಷಿಸಿದ್ದರೂ ಕೂಡ ೧೯೮೫ರಲ್ಲಿ ರಾಮಕೃಷ್ಣ ಹೆಗಡೆ, ಆ ನಂತರ ದೇವೇಗೌಡ ಸುತ್ತಲೇ ಮುಖ್ಯಮಂತ್ರಿ ಸ್ಥಾನದ ಹೆಸರು ಗಿರಕಿ ಹೊಡೆಯುತ್ತಿತ್ತು. ಅವರೇ ಈ ಅಂಶವನ್ನು ಪ್ರಚಾರದ ವೇಳೆ ಜನರ ಮುಂದೆ ಹೇಳಿಕೊಂಡಿದ್ದರೂ ಕೂಡ.
ಬಿಜೆಪಿ ಕಳೆದ ಚುನಾವಣೆಯವರೆಗೂ ಕೂಡ ಬಿ.ಎಸ್.ಯಡಿಯೂರಪ್ಪನವರನ್ನು (೨೦೧೩ ಹೊರತುಪಡಿಸಿ ಉಳಿದೆಲ್ಲ ಸಾರೆ) ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿಕೊಂಡೇ ಚುನಾವಣಗೆ ಹೋಗಿದ್ದು. ೨೦೧೮ರಲ್ಲಿ ಕೂಡ ಯಡಿಯೂರಪ್ಪನವರೇ ಸಿಎಂ ಎಂದು ಘೋಷಿಸಿಕೊಂಡರೂ ಬಹುಮತಕ್ಕೆ ಕೇವಲ ಹತ್ತು ಸ್ಥಾನ ಕಡಿಮೆಯಾದ ಪರಿಣಾಮ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದದ್ದು. ಆಪರೇಷನ್ ಕಮಲದ ನಂತರವೂ ಮುಖ್ಯಮಂತ್ರಿಯಾದದ್ದು ಯಡಿಯೂರಪ್ಪನವರೇ. ಅಲ್ಲಿಯವರೆಗೂ ಬಿಜೆಪಿ ತನ್ನ ಮಾತನ್ನು ಉಳಿಸಿಕೊಂಡು ಬಂದಿದೆ. ಇವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಂಡೇ ಮತ ಯಾಚಿಸಿದೆ.
ಜನತಾ ದಳ (ಎಸ್)ಗೆ ಈ ಯಾವ ಗೊಂದಲಗಳೇ ಇಲ್ಲ. ಈ ಪಕ್ಷದ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷ ಯಾರೇ ಇರಲಿ. ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ನಂತರ ದಳ ಘೋಷಣೆ ಮಾಡಿರುವುದು ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು. ಇದರಲ್ಲಿ ವಿವಾದವೂ ಇಲ್ಲ. ಬೇರೆ ನಾಯಕರ ಪ್ರಸ್ತಾಪವೂ ಇಲ್ಲ. ಈ ಸಾರೆಯ ೨೦೨೩ರ ಚುನಾವಣೆಯಲ್ಲಿ ಕೂಡ ಕುಮಾರಸ್ವಾಮಿ ನಾನೇ ಮುಂದಿನ ಮುಖ್ಯಮಂತ್ರಿ, ತಮ್ಮ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿಕೊಂಡೇ ಜನರ ಮುಂದೆ ನಿಂತಿದ್ದಾರೆ.
ಈಗ ಬಂದಿರುವ ಪ್ರಶ್ನೆ ಎಂದರೆ ಪ್ರಥಮ ಬಾರಿಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಮತದಾರರ ಎದಿರು ಸಾರಿಲ್ಲ. ಹಾಗೆಯೇ ಕಾಂಗ್ರೆಸ್ ಕೂಡ ಈ ಸಾರೆ ಸಾಮೂಹಿಕ ನಾಯಕತ್ವದ ಗೊಂದಲದೊಂದಿಗೆ ಮತದಾರರ ಮುಂದೆ ಹೋಗುತ್ತಿದೆ. ಒಮ್ಮೆ ಸಿದ್ದರಾಮಯ್ಯ, ಒಮ್ಮೆ ಡಿ.ಕೆ.ಶಿವಕುಮಾರ, ಈ ಮಧ್ಯೆ ದಲಿತ ಮುಖ್ಯಮಂತ್ರಿ… ಜೊತೆ ಜೊತೆಗೆ `ನಾನೇಕೆ ಮುಖ್ಯಮಂತ್ರಿಯಾಗಬಾರದು’ ಎನ್ನುವವರ ಸ್ವಯಂ ಘೋಷಣೆಗಳು ಕಾಲಕಾಲಕ್ಕೆ ಬರುತ್ತಲೇ ಇವೆ !
ನಿಮ್ಮಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಬಿಜೆಪಿ ಕೂಡ ಕೇಳುವಂತಿಲ್ಲ. ಏಕೆಂದರೆ ಅವರ ಸಮಸ್ಯೆಯೂ ಅದೇ ಆಗಿದೆ. ಭಾಜಪದ ಮುಂದಿನ ಮುಖ್ಯಮಂತ್ರಿ ಯಾರು? ಯಾರ ನೇತೃತ್ವದಲ್ಲಿ ಸರ್ಕಾರ ಎಂದು ಬಹಿರಂಗವಾಗಿ ಘೋಷಿಸಿಕೊಂಡೂ ಇಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮುಂದಿನ ಮುಖ್ಯಮಂತ್ರಿಯೇ? ಅಥವಾ ದೆಹಲಿಯಿಂದ ಸಿಎಂ ರವಾನೆಯಾಗುತ್ತಾರೆಯೇ? ಸಂಸದರೇ? ಹೊಸ ಮುಖವೇ? ಯಾವ ಸಮುದಾಯಕ್ಕೆ ಸೇರಿದವರು ಎನ್ನುವ ಬಗ್ಗೆ ಸ್ಪಷ್ಟತೆಯನ್ನು ಚಾಣಾಕ್ಯ ಶಾ, ನಡ್ಡಾನೀಡುತ್ತಿಲ್ಲ. ಹಾಗಾಗಿ ರಾಷ್ಟçಕ್ಕೆ ಮೋದಿ ಪ್ರಧಾನಿ ಎಂದು ಘೋಷಿಸಿಕೊಂಡಿರುವ ಭಾಜಪ ಮೂರೂವರೆ ವರ್ಷ ಆಡಳಿತ ನಡೆಸಿಯೂ ತಮ್ಮ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಜನತೆಯ ಮುಂದೆ ಹೇಳುತ್ತಿಲ್ಲ.
ಹಾಗಂತ, ಸಾಮೂಹಿಕ ನಾಯಕತ್ವವೇ ಎಂದರೆ, ಗುಜರಾತ್ ಮಾಡೆಲ್, ಯುಪಿ ಮಾಡೆಲ್, ಗೋವಾ ಮಾಡೆಲ್ ಎಂದಷ್ಟೇ ಶೂನ್ಯದೊಳಗೆ ಹೊಸ ಉದ್ಭವದ ಅವತಾರ ಆಗಲಿದೆ ಎಂದು ತೋರಿಸುತ್ತಿದೆ. ಹಾಗಾಗಿ, ಇದೇ ಪ್ರಥಮ ಬಾರಿಗೆ ಜನತೆ ತಮ್ಮ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ತಿಳಿಯದೇ ಮತದಾನ ಮಾಡಬೇಕಾಗಿದೆ.
ಅಂದರೆ ಅವರ ಸರ್ಕಾರದ ಯಾರು, ಇವರ ಸರ್ಕಾರ ಬಂದರೆ ಯಾರು ಎಂಬ ಸವಾಲ್- ಜವಾಬ್ ಸ್ವರೂಪದ ಪ್ರಶ್ನೆಗಳಿಗೆ ಈಗ ಉತ್ತರವಂತೂ ಇಲ್ಲ. ಯಾಕೆ ಚುನಾವಣೆಗೆ ಪೂರ್ವ ಮುಖ್ಯಮಂತ್ರಿ ಯಾರೆಂಬುದು ಸ್ಪಷ್ಟವಾಗಬೇಕೆಂದರೆ, ಅದೂ ಒಂದು ಜನತೆಗೆ ನೀಡುವ ವಾಗ್ದಾನ, ವಿಶ್ವಾಸಾರ್ಹತೆ, ಒಪ್ಪು-ತಪ್ಪುಗಳ ನಿಷ್ಕರ್ಷೆ, ಸಮ್ಮತಿ-ಅಸಮ್ಮತಿಗಳ ತೀರ್ಪು.. ಅವರ ಹಿನ್ನೆಲೆ-ಮುನ್ನೆಲೆಗಳ ತುಲನೆ, ಮುಖ್ಯಮಂತ್ರಿಯಾಗುವವರ ಜೀವನ ಶೈಲಿ, ನಡವಳಿಕೆ, ವಿಚಾರ ಎಲ್ಲವುಗಳೂ ಜನರ ವಿಮರ್ಷೆ, ಮಾಹಿತಿಗೊಳಪಡಬೇಕಾದ್ದೇ? ಮತದಾರರ ಮುಂದೆ ಮುಖ್ಯಮಂತ್ರಿ ಅಭ್ಯರ್ಥಿ ನೀಡುವ ಆಶ್ವಾಸನೆಗೇ ತೂಕದ್ದು…
ಈಗ ಮುಖ್ಯಮಂತ್ರಿ ಬೇಕಾಗಿದ್ದಾರೆ ಎನ್ನೋಣವೇ? ಹಾಗಂತ ಹೇಳುವ ಸ್ಥಿತಿಯಲ್ಲಿ ಚುನಾವಣೆಗೆ ಇಳಿದಿರುವ ರಾಜಕೀಯ ಪಕ್ಷಗಳಿಲ್ಲ. ಮತದಾರರ ಮುಂದೆ ಆಯ್ಕೆಗಳೂ ಇಲ್ಲ. ಇಂತಹ ಗೊಂದಲಮಯ, ಸಂದಿಗ್ಧ ಸ್ಥಿತಿಯಲ್ಲಿ ಮತದಾರರಿಗಿಂತ, ಅವರ ಮುಂದೆ ಬರಬೇಕಾದ ನಾಯಕರಿಗೆ ಪೇಚಾಟ.
ಅಥವಾ, ಏಕ್ ಸವಾಲ್, ದೊ ಸವಾಲ್, ತೀನ್ ಸವಾಲ್ ಎಂದು ಘೋಷಿಸಿಕೊಳ್ಳುವರೇ ಎನ್ನುವ ಪ್ರಶ್ನೆ… ಏಕೆಂದರೆ ಈ ರಾಜ್ಯ ಐದು ವರ್ಷದ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಎರಡು ಸಾರೆ ಕಂಡಿರುವ ಉದಾಹರಣೆಯೂ ಇದೆ. ಐದು ವರ್ಷಗಳಲ್ಲಿ ಎರಡು ಸಾರೆ ಚುನಾವಣೆಗೆ ಹೋದ ಉದಾಹರಣೆಯೂ ಇದೆ.
ಹಾಗಾಗಿ, ಈಗಿರುವುದಿಷ್ಟೇ, ಕೌನ್ ಬನೇಗಾ ಚೀಫ್ ಮಿನಿಸ್ಟರ್ !? ಏಕ್ ಸಾಲ್ ಕೆ ಲಿಯೆ, ದೊ ಸಾಲ್ ಕೆ ಲಿಯೆ ಎನ್ನೋಣವೇ ?