ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹೊರ ಭಾಗದಲ್ಲಿ ಹಾದು ಹೋಗಿರುವ ಮುಳವಾಡ ಏತ ನೀರಾವರಿ ಯೋಜನೆಯ ತುಂಬಿ ಹರಿಯುತ್ತಿದ್ದ ಕಾಲುವೆಗೆ ತಾಯಿ ರೇಣುಕಾ ಅಮೀನಪ್ಪ ಕೋನಿನ್(26 ), ಯಲ್ಲವ್ವ(2), ಅಮೃತಾ (1) ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ರೇಣುಕಾ ಗಂಡನ ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ರೇಣುಕಾ ಕಾಣೆಯಾಗಿರುವ ಕುರಿತು ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೇಣುಕಾ ಇಂದು ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಜೊತೆಯಲ್ಲಿ ಒಂದು ಹೆಣ್ಣು ಮಗುವಿನ ಶವ ಸಿಕ್ಕಿದೆ. ಇನ್ನೊಂದು ಮಗುವಿಗಾಗಿ ಪೊಲೀಸರೊಂದಿಗೆ ಗ್ರಾಮಸ್ಥರು ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ.
ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.