ಕೊಡಗಿನಲ್ಲೂ ಆಫ್ರಿಕನ್‌ ಹಂದಿ ಜ್ವರ ಪತ್ತೆ

KODAGU
Advertisement

ಮಡಿಕೇರಿ: ವಿದೇಶಗಳಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿರುವ ಆಫ್ರಿಕನ್‌ ಹಂದಿ ಜ್ವರ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಚರ್ಮಗಂಟು ಖಾಯಿಲೆ ವ್ಯಾಪಕವಾಗಿರುವ ಹೊತ್ತಿನಲ್ಲೇ ಕೊಡಗಿನಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದ್ದು, ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ಬಿ.ಸಿ.ಗಣೇಶ ಎಂಬುವರು ನಡೆಸುತ್ತಿದ್ದ ಹಂದಿ ಫಾರಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಜ್ವರ ಪತ್ತೆಯಾಗಿರುವ ಫಾರಂನಲ್ಲಿದ್ದ ಎಲ್ಲ 10 ಹಂದಿಗಳೂ ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಘೋಷಿಸಿದ್ದಾರೆ. ಇಲ್ಲೆಲ್ಲ ತಪಾಸಣೆ ನಡೆಸಿದ್ದು, ಎಲ್ಲೂ ಹಂದಿಗಳು ಕಂಡು ಬಂದಿಲ್ಲ. ಮಾಹಿತಿ ನೀಡಿರುವ ಪಶುಪಾಲನಾ ಇಲಾಖೆ ಅಧಿಕಾರಿಗಳು ‘ಆಫ್ರಿಕನ್ ಹಂದಿ ಜ್ವರ ಅಕ್ಟೋಬರ್ 3ರಂದು ಪತ್ತೆಯಾದ ಫಾರಂನಲ್ಲಿರುವ ಎಲ್ಲ ಹಂದಿಗಳೂ ಸತ್ತಿವೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೂ ಫಾರಂಗಳು ಇಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಅತೀವ ನಿಗಾ ವಹಿಸಲಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೆ ಮನುಷ್ಯರಿಗೆ ಈ ರೋಗ ಬರುವ ಸಾಧ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.