ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಲಿ ಶಾಸಕ ಹಾಗೂ ಮೂರು ಬಾರಿ ಗೆದ್ದ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದೆ. ಈ ಹಿನ್ನಲೆಯಲ್ಲಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಮೂಡಿಗೆರೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಂಪಿ ಕುಮಾರಸ್ವಾಮಿ ಸ್ಪೀಕರ್ ಕಾಗೇರಿಯವರನ್ನು ಭೇಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದ್ದ ಪರಿಣಾಮ ಬಿಜೆಪಿ ಹೈಕಮಾಂಡ್ ಈ ಬಾರಿ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡಲು ನಿರಾಕರಿಸಿದೆ.
ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಎಂ.ಪಿ ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರಿಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ಆತ್ಮೀಯ ಕ್ಷೇತ್ರದ ಮತದಾರ ಬಂಧುಗಳೇ, ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್ ಗೇ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ. ಸರ್ವೇ ಆಧರಿಸಿ ಟಿಕೆಟ್ ನೀಡುವ ಪಕ್ಷ ಪ್ರತಿ ಸರ್ವೇಯಲ್ಲಿ ಮುನ್ನಡೆಯಿದ್ದರು, ಟಿಕೆಟ್ ನಿರಾಕರಿಸಿದ್ದು ನೋವಿನ ವಿಚಾರ. ಮಳೆಯಿಂದಾಗಿ ಬೆಳೆ ಕಳೆದುಕೊಂಡ ಕ್ಷೇತ್ರದ ರೈತ ಭಾಂದವರಿಗೋಸ್ಕರ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿದ್ದು ಹೈ ಕಮಾಂಡ್‌ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ.
ನಿಮಗೆಲ್ಲಾ ತಿಳಿದಿರುವಂತೆ ಶತ್ರುಗಳಿಗೂ ಕೂಡ ಕೇಡು ಬಯಸದೇ ಎಲ್ಲರನ್ನು ಸದಾ ಗೌರವಿಸುತ್ತಾ ಪ್ರೀತಿಯಿಂದ ಕಾಣುತ್ತಲೇ ಬಂದೆ. ಪಕ್ಷದ ಕಾರ್ಯಕರ್ತರನ್ನ ಬೆಳೆಸಿದ್ದೇನೆ ಹೊರತು ನನ್ನ ಮನೆಯವರನ್ನಲ್ಲಾ. ಯೋಚಿಸುವ ಶಕ್ತಿ ನಿಮ್ಮಲ್ಲಿದೆ. ನನಗೆ ಶಕ್ತಿ ತುಂಬುವ ಕೈಗಳು ನೀವು. ಇನ್ನು ಮುಂದೆಯೂ ನಿಮ್ಮೊಂದಿಗೆ ಸದಾ ಜೊತೆಯಲ್ಲಿರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾ
ಟಿಕೆಟ್ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಎಂಪಿ ಕುಮಾರಸ್ವಾಮಿ ಇಂದು ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಸಭೆ ಬಳಿಕ ಜೆಡಿಎಸ್ ಸೇರುವ ಸಾಧ್ಯತೆಗಳಿವೆ.