ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಸಾಲಿನ ಬಜೆಟ್ ಸರ್ವಜನಹಿತ ಸಮತೋಲನ ಬಜೆಟ್ ಆಗಿದ್ದು, ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳಿಗೆ ಒತ್ತು ಕೊಡಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಪ್ರತಾಪ ರೂಢಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನ ಬಜೆಟ್ ಸುಸ್ಥಿರ, ಬಡವರ ಹಿತ, ಪರಿಸರ ಸಂರಕ್ಷಣೆಗೆ ಒತ್ತು ಕೊಡುವ ಯೋಜನೆಗಳನ್ನು ಒಳಗೊಂಡ ಬಜೆಟ್ ಆಗಿದೆ. ಗ್ರೀನ್ ಬಜೆಟ್ ಎಂದು ಹೆಮ್ಮೆಯಿಂದ ಕರೆಯಬಹುದು. ಅಷ್ಟೊಂದು ಪ್ರಮಾಣದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು.
ತೆರಿಗೆ ಭಾರವೇ ಇಲ್ಲ:
ಎಲ್ಲಕ್ಕಿಂತ ಮುಖ್ಯವಾಗಿ ತೆರಿಗೆ ಭಾರವೇ ಇಲ್ಲ. ಇದರಿಂದ ಮಧ್ಯಮ ವರ್ಗಕ್ಕೆ ಸಾಕಷ್ಟು ರಿಲೀಫ್ ಸಿಕ್ಕಂತಾಗಿದೆ. ರೈಲ್ವೆ ಇಲಾಖೆಗೆ ಒಟ್ಟು 2 ಲಕ್ಷ 40 ಸಾವಿರ ಕೋಟಿ ಒದಗಿಸಿದ್ದು, ವಿಪಕ್ಷಗಳು ಬಿಜೆಟ್ ಬಗ್ಗೆ ಮಾಡಿರುವ ಟೀಕೆ ಅರ್ಥವಿಲ್ಲದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬೊಮ್ಮಾಯಿಯವರದು ಉತ್ತಮ ಆಡಳಿತ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಉತ್ತಮ ಆಡಳಿತಗಾರರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶೇಷ ಪ್ರಯತ್ನದಿಂದ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಆಗಿದೆ ಎಂದು ರೂಢಿ ಮೆಚ್ಚುಗೆ ವ್ಯಕ್ತಪಡಿಸಿದರು.