ಹುಬ್ಬಳ್ಳಿ : ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಬಿಜೆಪಿ ನಾಯಕರಿ ಮಾಡಿದ ಘೋಷಣೆ ಮಾಡಿದ್ದಾರೆ. ಆದರೆ, ಆದೇಶಕ್ಕೆ ದಿನಾಂಕವಿಲ್ಲ. ಅನಾಥ, ನಿರ್ಗತಿಕ ಆದೇಶವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಚ್.ಕೆ.ಪಾಟೀಲ ಆರೋಪಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಘೋಷಣೆ ಮಾಡಿದರೆ, ಮುಖ್ಯಮಂತ್ರಿ ಸದನದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ 7 ಪುಟದ ಆದೇಶದ ಪ್ರತಿಗೆ ದಿನಾಂಕವಿಲ್ಲ. ಸಹಿ ಇಲ್ಲ. ಇದನ್ನು ಅಧಿಕೃತ ಆದೇಶ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಮೂಲಕ ಯೋಜನೆ ವ್ಯಾಪ್ತಿಯ ಅಮಾಯಕ ಜನರಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ. ಜನರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಮಹದಾಯಿ ಸಮಾವೇಶ ಹಮ್ಮಿಕೊಂಡಿದ್ದರಿಂದ ಜನರನ್ನು ದಿಕ್ಕು ತಪ್ಪಿಸಲು ಇಂತಹ ಕೆಲಸ ಮಾಡಿದ್ದಾರೆ. ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಆದರೆ, ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಜನವರಿ 2 ರಂದು ಮಹದಾಯಿ ಸಮಾವೇಶ ನಡದೇ ತಿರುತ್ತದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಳ್ಳುವರು ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2002-2003 ರಲ್ಲಿಯೇ ಕಳಸಾ ಯೋಜನೆಗೆ ನಿಯಮಬದ್ಧವಾಗಿ ಒಪ್ಪಿಗೆ ಪಡೆದಿದ್ದೆವು. ಆದರೆ, ಅಗಿನ ಗೋವಾ ಮುಖ್ಯಮಂತ್ರಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಒತ್ತಡ ತಂದು ತಡೆಯಾಜ್ಞೆ ಆದೇಶ ಮಾಡಿಸಿದರು ಎಂದು ಆರೋಪಿಸಿದರು.
ಕಳಸಾ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿತ್ತು. ಅರಣ್ಯ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿತ್ತು. ತಡೆಯಾಜ್ಞೆ ಒಂದೇ ಅಡ್ಡಿಯಾಗಿತ್ತು. ಕೇಂದ್ರ ಸರ್ಕಾರದ ಮೇಲೆ ಬಿಜೆಪಿ ನಾಯಕರು, ಮುಖ್ಯಮಂತ್ರಿ ಒತ್ತಡ ಹಾಕಿ ತೆರವುಗೊಳಿಸಿ ಯೋಜನೆ ಕಾಮಗಾರಿ ಶುರು ಮಾಡಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಹೊಸ ಡಿಪಿಆರ್ ಮಾಡಿ, ಅದಕ್ಕೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ದಿನಾಂಕವಿಲ್ಲದ, ಸಹಿ ಇಲ್ಲದ ಪತ್ರಗಳನ್ನು ಅದೇಶ ಪತ್ರ ಎಂದು ಸುಳ್ಳು ಹೇಳಿ ಜನಕ್ಕೆ ಮೋಸ ಮಾಡುವುದು ಬೇಕಿರಲಿಲ್ಲ ಎಂದು ದೂರಿದರು.
ಹೊಸ ಡಿಪಿಆರ್ ಕೇಂದ್ರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆದಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ವಿಪಕ್ಷಗಳ ಗಮನಕ್ಕೆ ತಂದಿಲ್ಲ. ತೋರಿಸಿಲ್ಲ. ಹೊಸ ಡಿಪಿಆರ್ನಲ್ಲಿ ಏನಿದೇ ಏನಿಲ್ಲ ಎಂಬುದು ಗೊತ್ತಿಲ್ಲ ಎಂದು ಟೀಕಿಸಿದರು.
ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿಯೇ ಇಲ್ಲ
ಡಿಪಿಆರ್ಗೆ ಅನುಮತಿ ಸಿಕ್ಕಿದೆ ಎಂದಿ ಬಿಜೆಪಿ ನಾಯಕರು ಇಲ್ಲಿ ಹೇಳಿಕೊಂಡಿದ್ದಾರೆ. ಆದರೆ, ನಾನು ತಜ್ಞ ಅಧಿಕಾರಿಗಳಿಂದ ಪಡೆದಿರುವ ಮಾಹಿತಿ ಪ್ರಕಾರ ಪರಿಸರ ಇಲಾಖೆಗೆ ಯೋಜನೆ ಕುರಿತು ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಪರಿಸರ ಇಲಾಖೆಗೆ ಪ್ರಸ್ತಾವನೆ ಇಲ್ಲದೇ ಹೇಗೆ ಆಯೋಗ ಅನುಮತಿ ನೀಡಲು ಸಾಧ್ಯ. ರಾಜ್ಯದ ಜನರಿಗೆ ಮುಖ್ಯಮಂತ್ರಿ ಉತ್ತರಿಸಲಿ ಎಂದು ಪಾಟೀಲ ಆಗ್ರಹಿಸಿದರು.
ಮಾಜಿ ಶಾಸಕ ಜಿ.ಎಸ್. ಪಾಟೀಲ,ಎನ್ ಎಚ್. ಕೋನರಡ್ಡಿ, ಮಾಜಿ ಸಚಿವ ಎ.ಎಂ ಹಿಂಡಸಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಪಕ್ಷದ ಮುಖಂಡ ವಸಂತ ಲದ್ವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಕಾಂಗ್ರೆಸ್ ಹಿರಿಯ ಮುಖಂಡ ಎಫ್.ಎಚ್ ಜಕ್ಕಪ್ಪನವರ, ಮುಖಂಡ ಮಹೇಂದ್ರ ಸಿಂಘಿ ಪತ್ರಿಕಾಗೋಷ್ಠಿಯಲ್ಲಿದ್ದರು.