ಸುಳ್ಯ: ನಾಡಿಗೆ ಬಂದು ತೋಟದ ಕೆರೆಗೆ ಬಿದ್ದು ಮೇಲೇಳಲಾಗದೆ ತೊಳಲಾಡಿದ ಕಾಡಾನೆಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.
ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಸುಳ್ಯ ಅಜ್ಜಾವರದ ತುದಿಯಡ್ಕದಲ್ಲಿ ಕೆರೆಯಲ್ಲಿ ಸಿಲುಕಿದ ಆನೆಗಳನ್ನು ಮೇಲಕ್ಕೆ ತರಲಾಯಿತು. ಸ್ಥಳೀಯರು ಕೆರೆಯ ಬದಿಯಲ್ಲಿ ಅಗೆತ ಮಾಡಿ ಮಣ್ಣು, ಮರಳು ಕಲ್ಲು ಹಾಕಿ ಆನೆಗಳಿಗೆ ಮೇಲೆ ಬರಲು ದಾರಿ ಮಾಡಿ ಕೊಡಲಾಯಿತು. ಕೆರೆಯಿಂದ ಈ ದಾರಿಯ ಮೂಲಕ ಆನೆಗಳು ಮೇಲೆ ಬಂದವು. ಒಂದು ಮರಿ ಆನೆಗೆ ಮೇಲೆ ಬರಲು ಸ್ವಲ್ಪ ಕಷ್ಟ ಆಯಿತು. ಆದನ್ನು ಬಳ್ಳಿ ಹಾಕಿ ಎಳೆದು ಹಿಂದಿನಿಂದ ದೂಡಿ ಕೆರೆಯಿಂದ ಮೇಲಕ್ಕೆ ತರಲಾಯಿತು.
ಒಟ್ಟಿನಲ್ಲಿ ಕೆರೆಯಲ್ಲಿ ಸಿಲುಕಿ ತೊಳಲಾಡಿದ ಆನೆಗಳು ಕೆರೆಯಿಂದ ಮೇಲೆ ಬಂದು ಅರಣ್ಯದತ್ತ ಓಟ ಕಿತ್ತವು. ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ ಎರಡು ದೊಡ್ಡ ಆನೆಗಳು ಮತ್ತು ಎರಡು ಚಿಕ್ಕ ಮರಿ ಆನೆಗಳು ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗಿಳಿದಿದ್ದು ಅಲ್ಲೇ ಸಿಕ್ಕಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಆಳೆತ್ತರದ ಕೆರೆಯಲ್ಲಿ ತುಂಬಾ ನೀರಿದ್ದ ಕಾರಣ ಆನೆಗಳಿಗೆ ಮೇಲೆ ಬರಲು ಆಗದ ಸ್ಥಿತಿ ಉಂಟಾಗಿತ್ತು. ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಲ್ಲಿ ರಕ್ಷಣಾ ಕಾರ್ಯ ಕೈಗೊಂಡರು.