ಹಾವೇರಿ: ಕೆರೆಯಲ್ಲಿ ಈಜಲು ಹೋಗಿದ್ದ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿ ನೀರುಪಾಲಾದ ಘಟನೆ ತಾಲೂಕಿನ ದೇವಗಿರಿ ಗ್ರಾಮದ ಚೌಡಮ್ಮನ ಕೆರೆಯಲ್ಲಿ ರವಿವಾರ ಸಂಭವಿಸಿದ್ದು, ಸೋಮವಾರ ಮೃತದೇಹ ಪತ್ತೆಯಾಗಿದೆ.
ಮೈಸೂರು ಮೂಲದ ನೂಮಾನ್ ಪಾಷಾ(೧೮) ನೀರುಪಾಲಾದ ವಿದ್ಯಾರ್ಥಿ. ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ ಐವರು ವಿದ್ಯಾರ್ಥಿಗಳು ರವಿವಾರ ಮಧ್ಯಾಹ್ನದ ಹೊತ್ತಿನಲ್ಲಿ ಕೆರೆಗೆ ಈಜಲು ಇಳಿದಿದ್ದಾರೆ. ಈಜಲು ಬಾರದ್ದರಿಂದ ನೂಮಾನ್ ಪಾಷಾ ಮುಳುಗಿದ್ದಾನೆ. ಈತನ ರಕ್ಷಣೆಗೆ ಸ್ನೇಹಿತರು ಹಾಗೂ ರಕ್ಷಣಾ ತಂಡದವರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.