ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುತ್ತಿರುವ ಪೊಲೀಸರು ಸೋಮವಾರ ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಅಥಣಿ ತಾಲೂಕಿನ ನದಿ ಇಂಗಳಗಾಂವದ ಕಿರಣ ಸಹದೇವ ಕೊರಬು(೨೮), ಬೈಲಹೊಂಗಲ ತಾಲೂಕಿನ ಜಕನಾಯಕನಕೊಪ್ಪದ ನಾಗಯ್ಯ ಈರಯ್ಯ ಹುಬ್ಬಳ್ಳಿ(೨೬), ಗೋಕಾಕ ತಾಲೂಕಿನ ಹಡಗಿನಾಳದ ನಾಗಪ್ಪ ಉದ್ದಪ್ಪ ಹೊಸಮನಿ(೨೯), ಗೋಕಾಕ ತಾಲೂಕಿನ ಬೆನಚಿನಮರಡಿಯ ಶಶಿಕಾಂತ ಶಿವಪ್ಪ ಮಾಗಿ(೨೫) ಹಾಗೂ ಗೋಕಾಕ ತಾಲೂಕಿನ ಬಗರನಾಳದ ದೇವರಾಜ ಭೀಮಪ್ಪ ಅವಲಿ(೨೬) ಬಂಧಿತರು. ಕಳೆದ ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ೫ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್, ೫ ಮೊಬೈಲ್ ಮತ್ತಿತರ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.