ಮಂಗಳೂರು: ಕುತ್ತಾರು ಕೊರಗಜ್ಜನ ಏಳು ತಲಗಳಲ್ಲಿ ಒಂದಾದ ಮುನ್ನೂರು ಗ್ರಾಮದ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಕೊರಗ ತನಿಯ ದೈವದ ಆದಿಸ್ಥಳ ದೆಕ್ಕಾಡುವಿಗೆ ಖ್ಯಾತ ನಟ ಡಾ. ಶಿವರಾಜಕುಮಾರ್ ಇಂದು ಕುಟುಂಬ ಸಹಿತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಂಬರ ಇಲ್ಲ, ಒಂದು ಚಕ್ಕುಲಿ, ಎಲೆ ಅಡಿಕೆ ಇಟ್ಟು ಸರಳ ರೀತಿಯಲ್ಲಿ ಹರಕೆ ಇಟ್ಟು ಮನುಷ್ಯ ತನ್ನ ಸಮಸ್ಯೆ, ಬೇಡಿಕೆಯನ್ನು ದೈವದ ಕಲ್ಲಿನ ಮುಂದೆ ನಿಂತು ಮನಸ್ಸಿನಲ್ಲಿ ಪ್ರಾರ್ಥಿಸಿ ನಾವಿಟ್ಟ ಅದೇ ಚಕ್ಕುಲಿಯನ್ನು ಕೊರಗಜ್ಜನ ಪ್ರಸಾದವಾಗಿ ಸ್ವೀಕಾರ, ಇಂತಹ ಸರಳವಾದ ಆರಾಧನ ಕ್ರಮವೇ ಮೌಲ್ಯಯುತವಾಗಿರುವುದು ಎಂದರು.
ಮನಸ್ಸಿನ ಶಾಂತಿಗಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಥಮ ಬಾರಿಗೆ ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ನಟಿ ರಕ್ಷಿತಾ ಅವರು ಕೊರಗಜ್ಜನ ಕ್ಷೇತ್ರದ ಬಗ್ಗೆ ತಿಳಿಸಿದ್ದರು. ಒಮ್ಮೆ ಭೇಟಿ ನೀಡಿ ಅಣ್ಣ ಎಂದಿದ್ದರು. ಈ ಹಿಂದೆ ತನ್ನ ಹಲವು ಚಿತ್ರಗಳ ಚಿತ್ರೀಕರಣ ಕೂಡಾ ಮಂಗಳೂರು-ಉಡುಪಿ ಭಾಗಗಳಲ್ಲೇ ಜಾಸ್ತಿಯಾಗಿ ನಡೆದಿದೆ. ಆದರೆ ಇದೀಗ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ಕೊಡುವ ಸಮಯ ಬಂತು. ಇಲ್ಲಿನ ಸರಳವಾದ ಆರಾಧನಾ ಕ್ರಮ ನೋಡಿ ಮನಸ್ಸಿಗೆ ಸಂತೋಷವಾಯಿತು. ಕುಟುಂಬ ಸಮೇತರಾಗಿ ಪ್ರಾರ್ಥಿಸಿದ್ದೇವೆ ಎಂದರು.
ಸ್ವತ: ಶಿವರಾಜ್ ಕುಮಾರ್ ಅವರೇ ಕಾರು ಚಲಾಯಿಸಿಕೊಂಡು ಕುಟುಂಬ ಸಮೇತರಾಗಿ ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಭಂಡಾರಮನೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಗಣ್ತಡಿ ಗುತ್ತು ಮನೆಗೆ ಭೇಟಿ ನೀಡಿ ಅಲ್ಲಿನ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರದ ಮೂಲ್ಯಣ್ಣರಾದ ಬಾಲಕೃಷ್ಣ ಮೂಲ್ಯಣ್ಣ, ಭಂಡಾರ ಮನೆಯ ಪೂಜಾರಿಯಾದ ವಿಶ್ವನಾಥ್ ಪೂಜಾರಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಪತ್ನಿ ಗೀತಾ, ಪುತ್ರಿಯರಾದ ಡಾ. ನಿರೂಪಮಾ, ನಿವೇದಿತಾ ಶಿವರಾಜ್ಕುಮಾರ್ ಜತೆಗಿದ್ದರು.
ಶ್ರೀ ಪಂಜಂದಾಯ ಬಂಟ ವೈದ್ಯನಾಥ ಕೊರಗ ತನಿಯ ದೈವದ ಆದಿಸ್ಥಳ ದೆಕ್ಕಾಡು ಕುತ್ತಾರು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರ ಬಿ. ಶ್ರೀಧರ ಶೆಟ್ಟಿ ಮಾಗಣ್ತಡಿ, ದೇವಿ ಪ್ರಸಾದ್ ಶೆಟ್ಟಿ ಮಾಗಣ್ತಡಿ, ಪ್ರೀತಂ ಶೆಟ್ಟಿ ಮಾಗಣ್ತಡಿ, ಮಹಾಬಲ ಹೆಗ್ಡೆ ಮಾಗಣ್ತಡಿ, ಮನೋಜ್ ಹೆಗ್ಡೆ ಮಾಗಣ್ತಡಿ, ಜಯ್ ಕಿಶನ್ ರೈ ಮಾಗಣ್ತಡಿ, ರಂಜಿತ್ ಸುಲಾಯ ಮಾಗಣ್ತಡಿ, ಸ್ವಾತಿ ಶೆಟ್ಟಿ, ಶೋಭಾ ರೈ ಮಾಗಣ್ತಡಿ, ವಿದ್ಯಾಚರಣ್ ಭಂಡಾರಿ, ವೈಶಾಖ್ ಶೆಟ್ಟಿ, ಶ್ರೀರಾಮ ರೈ, ಜಗನ್ನಾಥ ಶೆಟ್ಟಿ, ಮನೋಜ್ ಚಂದ್ರ ಶೆಟ್ಟಿ, ತಿಮ್ಮಪ್ಪ ಪೂಂಜ, ಶ್ರೀ ಕ್ಷೇತ್ರ ಕದ್ರಿಯ ಟ್ರಸ್ಟಿ ದೇವದಾಸ್ ಪಾಂಡೇಶ್ವರ ಮೊದಲಾದವರಿದ್ದರು.