ಚಿತ್ರದುರ್ಗ: ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನಾವೇ ಆಗಮಿಸಿ ಉದ್ಘಾಟನೆಯನ್ನು ಕೂಡ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ಹೊಳೆಲ್ಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ, ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ, ಅವರು ಕೈಗೊಂಡ ದಿಟ್ಟ ನಿಲುವಿನಿಂದಾಗಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ 5300 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಿದೆ. ಮಧ್ಯ ಕರ್ನಾಟಕದ ಜನರ ಭೂಮಿಗೆ ನೀರು ಕೊಟ್ಟು, ಬರದ ಭೂಮಿಯನ್ನು ಹಸಿರಾಗಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.