ಹುಬ್ಬಳ್ಳಿ: ಕಾನೂನು ವಿಶ್ವವಿದ್ಯಾಲಯದ ಚಟುವಟಿಕೆಗಳು ವೇಗ ಪಡೆಯಲು ಸಿಬ್ಬಂದಿ ಕೊರತೆ ತೊಡಕಾಗಿದೆ. ಶೇ. ೬೦ರಷ್ಟು ಸಿಬ್ಬಂದಿ ಕೊರತೆ ಇದ್ದು, ಕಾನೂನು ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಶೀಘ್ರ ಹುದ್ದೆ ನೇಮಕಾತಿಗೆ ಪ್ರಯತ್ನಿಸಲಾಗುವುದು ಎಂದು ಕಾನೂನು ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ನೇಮಕಾತಿಯಾಗಿಲ್ಲ. ಒಂದು ಅವಧಿಯಲ್ಲಿ ಮಾತ್ರ ಪ್ರಾಧ್ಯಾಪಕರ ನೇಮಕಾತಿಯಾಗಿದೆ. ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ. ಸಿಬ್ಬಂದಿ ಕೊರತೆ ಇರುವ ಬಗ್ಗೆ ಕಾನೂನು ಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೇ ಮೈಸೂರು, ಕಲಬುರ್ಗಿ, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯಗಳ ಕಾನೂನು ಕಾಲೇಜುಗಳು ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಬೇಕು ಎಂದರು.
ಕಳೆದ ಸೆ. ೩ರಂದು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ನೇಮಕಗೊಂಡಿದ್ದೇನೆ. ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ವಿಶ್ವವಿದ್ಯಾಲಯದ ಯಾವುದೇ ಕೆಲಸವನ್ನು ಅಧಿಕಾರ ಎಂದು ಸ್ವೀಕರಿಸದೇ ಜವಾಬ್ದಾರಿ ಎಂದು ಭಾವಿಸಿ ಕರ್ತವ್ಯ ನಿಭಾಯಿಸುತ್ತೇನೆ ಎಂದು ನುಡಿದರು.
೧೦೮ ಸಂಯೋಜಿತ ಕಾಲೇಜುಗಳ ನಮ್ಮ ವ್ಯಾಪ್ತಿಯಲ್ಲಿವೆ. ಒಂದು ವರ್ಷದಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಯಾವ ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಪರಿಷ್ಕೃತ ಕ್ರಿಯಾಯೋಜನೆಯನ್ನು ರೂಪಿಸಲಾಗುವುದು ಎಂದು ಕುಲಪತಿ ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ ಸ್ಥಾಪಿಸಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಅಧ್ಯಕ್ಷರಾಗಿದ್ದಾರೆ. ಈ ಪೀಠದಿಂದ ಉಪನ್ಯಾಸ ಹಾಗೂ ಸಮ್ಮೇಳನಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಜಿ.ಬಿ. ಪಾಟೀಲ, ಡೀನ್ ಪ್ರೊ. ರತ್ನಾ ಭರಮಗೌಡರ ಇದ್ದರು.