ಕಾಡು ಸೇರದೆ ಮರಳಿ ಒಂಟಿಯಾದ ಮರಿ ಆನೆ

ಆನೆ
Advertisement

ಮಂಗಳೂರು: ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಲ್ಲಿ ಎರಡು ದೊಡ್ಡ ಆನೆಗಳ ಜೊತೆಗೆ ಬಿದ್ದ ಮರಿಯಾನೆಗಳಲ್ಲಿ ಒಂದು ಮರಿಯಾನೆಯನ್ನು ತಮ್ಮ ತಂಡಕ್ಕೆ ಉಳಿದ ಕಾಡಾನೆಗಳು ಸೇರಿಸಿಕೊಳ್ಳುತ್ತಿಲ್ಲ.
ಆಹಾರ ಅರಸುತ್ತಾ ಬಂದ ಎರಡು ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ಏ. 13ರಂದು ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿವೆ. ಸಂಪೂರ್ಣ ಸುಸ್ತಾಗಿದ್ದ ಸುಮಾರು 3 ತಿಂಗಳ ಒಂದು ಗಂಡು ಮರಿಯಾನೆ ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಮರಿಯಾನೆಯನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ಹತ್ತಿಸಿದ್ದರು. ಆದರೆ ಇದೀಗ ಆ ಮರಿಯಾನೆಯು ತನ್ನ ತಂಡದೊಂದಿಗೆ ಸೇರಿಕೊಳ್ಳದೆ ದೂರವೇ ಉಳಿದಿದೆ. ಮರಿಯಾನೆಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಉಳಿದ ಕಾಡಾನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಮಾತನಾಡಿ, “ಮರಿಯಾನೆ ದೊಡ್ಡ ಆನೆಗಳ ಹಿಂಡಿನಿಂದ ಸುಮಾರು ೨೦೦ ಮೀಟರ್ ದೂರದಲ್ಲೇ ಇದೆ. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ ಅದು ಮರಳಿ ವಾಪಸ್ ಬರುತ್ತಿದೆ. ಈ ಆನೆ ಮರಿ ತನ್ನ ಗುಂಪಿನೊಂದಿಗೆ ಹೋಗಲು ಮುಂದಾಗುತ್ತಿಲ್ಲ. ಈಗಾಗಲೇ ತಜ್ಞ ವೈದ್ಯರ ಸಲಹೆಗಳನ್ನು ಪಡೆಯುತ್ತಿದ್ದೇವೆ. ಅವರ ಸಲಹೆಯಂತೆ ಕಾಡಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯಾನೆಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನ ನಡೆಸುತ್ತಿದ್ದೇವೆ. ಮರಿಯಾನೆ ಯಾವುದೇ ಆಹಾರ ಸೇವಿಸದೆ ಇರುವುದು ಇದೀಗ ನಮಗೆ ಸಮಸ್ಯೆಯಾಗಿದೆ. ಅದಕ್ಕೂ ತಜ್ಞರ ಸಲಹೆ ಪಡೆಯುತ್ತಿದ್ದೇವೆ. ನಮ್ಮ ಸಿಬ್ಬಂದಿ ಮರಿಯಾನೆಗೆ ಕಾವಲಾಗಿ ನಿಂತಿದ್ದಾರೆ. ಮರಿಯಾನೆಯನ್ನು ಗುಂಪಿಗೆ ಸೇರಿಸಲು ಸಾಧ್ಯವೇ ಆಗದಿದ್ದರೆ ಅದನ್ನು ಯಾವುದಾದರೂ ಆನೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಾಕುವ ನಿರ್ಧಾರ ಕೈಗೊಂಡಿದ್ದೇವೆ” ಎಂದು ಹೇಳಿದರು.