ಕಾಡಸಿದ್ಧನ ಜಾತ್ರೆಗೆ ದುಪ್ಪಟ್ಟಾದ ಮದ್ದಿನ ಮೆರಗು

ಕಾಡಸಿದ್ದೇಶ್ವರ ಜಾತ್ರೆ
Advertisement

ಬಾಗಲಕೋಟೆ: ಶತಮಾನದ ಇತಿಹಾಸವಿರುವ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮದ್ದಿನ ಮೆರಗು ಈ ಬಾರಿ ಎಂದಿಗಿಂತಲೂ ದುಪ್ಪಟ್ಟಾಗಿರುವದು ಕಂಡು ಬಂದಿತು.
ರಥೋತ್ಸವ ದಿನಕ್ಕಿಂತಲೂ ಗುರುವಾರ ಕಳಸೋತ್ಸವದಂದು ಇಡೀ ಬನಹಟ್ಟಿ ಪಟ್ಟಣದಾದ್ಯಂತ ಪಟಾಕಿಗಳ ಸದ್ದು ಎಲ್ಲರಲ್ಲಿಯೂ ಚುಯ್ ಗುಡುತ್ತಿತ್ತು. ರಾತ್ರಿ ಬಾನಂಗಳದ ಕಾರ್ಮೋಡದಲ್ಲಿ ಸಿಡಿಯುತ್ತಿದ್ದ ಪಟಾಕಿ ರಂಗು ಬೆಳಕಿನ ಚಿತ್ತಾರ ವೈಭವ ಮೂಡಿಸಿತ್ತು.
ಸೀಮಿತ ಪ್ರದೇಶವಿಲ್ಲದೆ ಇಡೀ ಪಟ್ಟಣದಾದ್ಯಂತ ಜರುಗಿದ ಕಳಸೋತ್ಸವಕ್ಕೆ ಪಟಾಕಿಗಳೇ ಕಾಡಸಿದ್ಧನ ಸ್ವಾಗತಕ್ಕೆ ನಿಂತಿದ್ದು ವಿಶೇಷವಾಗಿತ್ತು. ಕವಿದ ಕತ್ತಲೆ ಮೋಡದಲ್ಲಿ ಬಗೆ ಬಗೆಯ ಸದ್ದು ಹಾಗೂ ವರ್ಣ ರಂಜಿತ ಚಿತ್ತಾರದ ಬೆಳಕಿನ ಮೋಡಿ ಮಾಡುತ್ತಿದ್ದವು. ಮದ್ದು ಸುಡುವ ವೈಭವ ಕಣ್ತುಂಬಿಕೊಳ್ಳಲು ಪಟ್ಟಣದ ಸಾವಿರಾರು ಜನ ಸಾಕ್ಷಿಯಾದರು. ಪ್ರತಿ ಮದ್ದಿನ ವರ್ಣರಂಜಿತ ಸ್ಫೋಟದ ಸಂದರ್ಭದಲ್ಲಿ ನೆರೆದ ಜನರಿಂದಲೂ ಮಕ್ಕಳಿಂದ ಕೇಳಿ ಬರುತ್ತಿದ್ದ ಕೇಕೆ ಹಾಗೂ ಚಪ್ಪಾಳೆಗಳು ಮುಗಿಲು ಮುಟ್ಟಿದ್ದವು. ಸಿಡಿಯುತ್ತಿದ್ದ ಪಟಾಕಿಗಳು ಸುಂಯ್ ಗುಡುತ್ತ ಬಾನಿಗೆ ನೆಗೆಯುತ್ತ ಬಣ್ಣದ ರಂಗೋಲಿ ಬಿಡಿಸುತ್ತಿದ್ದವು.