ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ಸಿಗರ ಧರಣಿ

ಸುಳ್ಯ
Advertisement

ಮಂಗಳೂರು: ವಿಧಾನ ಸಭಾ ಚುನಾವಣೆಗೆ ಸುಳ್ಯ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಘೋಷಿಸಿರುವ ಅಭ್ಯರ್ಥಿ ಜಿ. ಕೃಷ್ಣಪ್ಪರನ್ನು ಬದಲಿಸಿ ಕೆಪಿಸಿಸಿ ಸದಸ್ಯ ಎಚ್.ಎಂ ನಂದಕುಮಾರ್‌ರಿಗೆ ಟಿಕೆಟ್ ನೀಡುವಂತೆ ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿ ಆಗ್ರಹ ವ್ಯಕ್ತಪಡಿಸಿದ್ದಾರೆ.
ಸುಮಾರು 15ಕ್ಕೂ ಅಧಿಕ ಬಸ್ಸುಗಳಲ್ಲಿ ಆಗಮಿಸಿದ್ದ ಸುಳ್ಯ ಮತ್ತು ಕಡಬ ಬ್ಲಾಕ್ನ ಕಾಂಗ್ರೆಸ್ ಕಾರ್ಯಕರ್ತರು ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.
ನಂದಕುಮಾರ್ ಕುಮಾರ್ ಅವರಿಗೆ ಬಿ’ ಫಾರಂ ಕೊಡಿ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಡುತ್ತೇವೆ. ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿ. ಹೈಕಮಾಂಡ್ ತೀರ್ಮಾನ ಪರಾಮರ್ಶೆ ಮಾಡಿ ನಂದಕುಮಾರ್ಗೆ ಟಿಕೆಟ್ ನೀಡಿ ಎಂಬ ಫಲಕಗಳನ್ನು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮನವಿ ಸ್ವೀಕರಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆಗಮಿಸುವಂತೆ ಪಟ್ಟು ಹಿಡಿದು ಧರಣಿ ಕುಳಿತರು.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕಾರಣದಿಂದಾಗಿ ಪಕ್ಷದ ಕಾರ್ಯಕರ್ತರು ತೊಂದರೆಗೊಳಗಾಗಿದ್ದಾರೆ. ಎಚ್. ಎಂ.ನಂದಕುಮಾರ್ ಸುಳ್ಯ ಕ್ಷೇತ್ರದ ಪಕ್ಷದ ಉಸ್ತುವಾರಿಯಾದ ಬಳಿಕ ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸಿ ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್-೧೯ ಸಮಯದಲ್ಲಿ ಕ್ಷೇತ್ರದ ಎಲ್ಲ ಕಡೆ ಆಹಾರ ಕಿಟ್ಗಳನ್ನು ವಿತರಣೆ ಮಾಡಿರುತ್ತಾರೆ. ಬಡಜನರ, ವಿಕಲಚೇತನರ ಪಾಲಿನ ಆಶಾಕಿರಣರಾಗಿರುತ್ತಾರೆ. ಧಾರ್ಮಿಕ ಕಾರ್ಯಕ್ರಮ, ಕ್ರೀಡಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಪಕ್ಷದ ಕಾರ್ಯಕರ್ತರ ಅಪೇಕ್ಷೆಯಂತೆ ಕೂಡಲೇ ಸ್ಪಂದಿಸಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದ್ದಾರೆ. ಕ್ಷೇತ್ರದಾದ್ಯಂತ ಕಳೆದ ೪ ವರ್ಷಗಳಿಂದ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜನಸೇವೆಗೈಯುತ್ತಿರುವ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಪಕ್ಷಾತೀತವಾಗಿ ಅತೀ ಹೆಚ್ಚು ಜನ ಬೆಂಬಲ ಹೊಂದಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ನೀಡಬೇಕು. ಈಗಾಗಲೇ ಹೈಕಮಾಂಡ್ ಕೃಷ್ಣಪ್ಪರನ್ನು ಅಭ್ಯರ್ಥಿಯಾಗಿ ಗೋಷಿಸಿದ್ದು, ಪಕ್ಷದ ನಿಷ್ಠಾವಂತ ಸಾವಿರಾರು ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನೋವುಂಟು ಮಾಡಿದೆ ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಧುರೀಣರಾದ ಬಾಲಕೃಷ್ಣ ಬಳ್ಳೇರಿ, ಗೋಕುಲ್ದಾಸ್ ಸುಳ್ಯ, ಉಷಾ ಅಂಚನ್ ಮಾತನಾಡಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಕಾರ್ಯಕರ್ತರ ಯಾವುದೇ ಅಭಿಪ್ರ್ರಾಯ ಸಂಗ್ರಹಿಸದೆ ನಾಯಕರುಗಳ ಮಾತಿನಂತೆ ಸುಳ್ಯದಲ್ಲಿ ಯಾವೊಬ್ಬ ಕಾರ್ಯಕರ್ತರಿಗೂ ಪರಿಚಯವಿಲ್ಲದ, ಮತದಾರರಿಗೂ ಒಳವಿಲ್ಲದ ಜಿ ಕೃಷ್ಣಪ್ಪ ರವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಇದರಿಂದಾಗಿ ತಮಗೆ ನೋವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಶಶಿಧರ್ ಎಂ.ಜೆ, ಸಚಿನ್‌ರಾಜ್ ಶೆಟ್ಟಿ, ಅನಿತಾ ರೈ ಬೆಳ್ಳಾರೆ, ಮುತ್ತಪ್ಪ ಪೂಜಾರಿ, ಸತ್ಯಕುಮಾರ್ ಆವಂಜೆ, ಚೇತನ್ ಕಜೆಗದ್ದೆ, ಗಣೇಶ್ ಕೈಕುರೆ, ಪ್ರವೀಣ್ ಕೆಡೆಂಜಿ , ಸುಧೀರ್ ದೇವಾಡಿಗ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.