ಕಾಂಗ್ರೆಸ್ ಭ್ರಷ್ಟಾಚಾರದ ತಾಯಿಬೇರಿದ್ದಂತೆ: ಅರುಣ್ ಸಿಂಗ್

ಅರುಣ್ ಸಿಂಗ್
Advertisement

ದಾವಣಗೆರೆ: ಭ್ರಷ್ಟಾಚಾರದ ತಾಯಿಬೇರು ಇರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಇಂತಹ ಕಾಂಗ್ರೆಸ್ಸಿಗರು ಪಾರದರ್ಶಕ ಆಡಳಿತ ನಡೆಸುತ್ತಿರುವ ಬಿಜೆಪಿ ಬಗೆಗೆ ಶೇ.40 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಬಡ ಜನತೆಗೆ ನೀಡುವ ಅನ್ನ ಭಾಗ್ಯದ ಅಕ್ಕಿಯಲ್ಲೂ ಸಹ ಭ್ರಷ್ಟಾಚಾರ ನಡೆದಿದೆ. ಇವರು ಸರಿಯಾದ ಆಡಳಿತ ನಡೆಸದೆ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಈಗ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ದೂರಿದರು.

ಸಿಎಂ ಬೊಮ್ಮಾಯಿ ಅಂದ್ರೆ ಒಬ್ಬ ಕಾಮನ್ ಮ್ಯಾನ್. ಅವರು ಸಿಎಂ ಆದಾಗಿನಿಂದ ಸಾಕಷ್ಟು ಜನಪರ ಯೋಜನೆಗಳನ್ನು ತಂದಿದ್ದಾರೆ. ರೈತರ ಮಕ್ಕಳಿಗೆ ಪ್ರತಿ ತಿಂಗಳು ಶಿಷ್ಯವೇತನ ನೀಡಿದ್ದಾರೆ. ಕಾಂಗ್ರೆಸ್ಸಿಗರು ಸಿಎಂ ವಿರುದ್ದ ಆರೋಪ ಮಾಡಿದರೆ ಅದು ಜನ ಸಾಮಾನ್ಯರ ವಿರುದ್ಧ ಆರೋಪ ಮಾಡಿದಂತೆ ಎಂದರು.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಹೋಗುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡಲು ನಿರಾಕರಿಸಿದರು.

ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಹಾಗೂ ಸಚಿವರ ಬಗ್ಗೆ ಯತ್ನಾಳ್ ನೇರ ಆರೋಪ ಮಾಡುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲರೂ ಸೇರಿ ಕರ್ನಾಟಕದಲ್ಲಿ ಬಿಜೆಪಿ‌ ಬಲಪಡಿಸಬೇಕಾಗಿದೆ ಎಂದಷ್ಟೆ ಸೂಚ್ಯವಾಗಿ ಉತ್ತರಿಸಿದರು.