ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ: ದೇಸಾಯಿ

Advertisement

ತೇರದಾಳ: ಕಳೆದ ಬಾರಿ ಮಾಜಿ ಸಚಿವೆ ಉಮಾಶ್ರೀ ಸೋಲಿನ ನಂತರ ಕುಗ್ಗಿ ಹೋಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಬಲ ತುಂಬುವಲ್ಲಿ ಡಾ. ಪದ್ಮಜಿತ ನಾಡಗೌಡ, ಡಾ. ಎ.ಆರ್. ಬೆಳಗಲಿ ಸೇರಿದಂತೆ ಅನೇಕರು ಶ್ರಮಿಸಿದ್ದಾರೆ. ಇದ್ಯಾವದನ್ನೂ ಗುರ್ತಿಸದೆ ಸಿದ್ದು ಕೊಣ್ಣೂರರಿಗೆ ಟಿಕೆಟ್‌ನ್ನು ವರಿಷ್ಠರಿಂದ ಮಾರಾಟ ಮಾಡಲಾಗಿದೆ ಎಂದು ಪಕ್ಷದ ಮುಖಂಡ ನೀಲೇಶ ದೇಸಾಯಿ ಗಂಭೀರ ಆರೋಪ ಮಾಡಿದರು.
ರಬಕವಿಯ ಡಾ. ಪದ್ಮಜೀತ ನಾಡಗೌಡ ಪಾಟೀಲ ನಿವಾಸದೆದುರು ಸಾವಿರಾರು ಕಾರ್ಯಕರ್ತರು ನೆರೆದಿದ್ದ ಸಂದರ್ಭ ಮಾತನಾಡಿದ ಅವರು, ಟಿಕೆಟ್ ಪ್ರಾಮಾಣಿಕ ಹಾಗು ಕ್ಷೇತ್ರಕ್ಕೆ ದುಡಿದ ವ್ಯಕ್ತಿಗೆ ದೊರಕಿಲ್ಲ. ಇದರಿಂದ ಎಲ್ಲ ಕಾರ್ಯಕರ್ತರಿಗೂ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ, ಟಿಕೆಟ್ ದೊರಕುವ ಅತ್ಯಂತ ವಿಶ್ವಾಸ ನನಗಿತ್ತು. ಬೇರುಮಟ್ಟದಲ್ಲಿ ಕೆಲಸ ಮಾಡಿ, ಪಕ್ಷ ಕಟ್ಟಿ ಬೆಳೆಸಿದ್ದೇನೆ. ವರಿಷ್ಠರ ನಿರ್ಧಾರವನ್ನು ಹಿಂಪಡೆದು ಪಾರದರ್ಶಕವಾಗಿ ಕ್ಷೇತ್ರದ ಕಾರ್ಯಕರ್ತರ ಹಾಗು ಮತದಾರರ ಒತ್ತಾಯಕ್ಕೆ ಸಹಕರಿಸಬೇಕೆಂದರು.
ಮುಖಂಡ ಶಂಕರ ಸೊರಗಾಂವಿ ಮಾತನಾಡಿ, ಕಟ್ಟಕಡೆಯ ಮತದಾರ ಹಾಗು ಕಾಂಗ್ರೆಸ್‌ನ ಸಮಸ್ತ ಕಾರ್ಯಕರ್ತರು ನಾಡಗೌಡರ ಪರವಾಗಿದ್ದಾರೆ. ಟಿಕೆಟ್ ಕೈ ತಪ್ಪಿದ್ದರಿಂದ ಎಲ್ಲರಲ್ಲಿಯೂ ತೀವ್ರ ಬೇಸರ ತಂದಿದ್ದಲ್ಲದೆ ಸುಮಾರು 15 ರಿಂದ 20 ಸಾವಿರ ಸಂಖ್ಯೆಯ ಬೆಂಬಲಿಗರಿಂದ ಮಹತ್ವದ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವದು. ಇದಕ್ಕೆ ಅವಕಾಶ ಕಲ್ಪಿಸದೆ ಪಕ್ಷದ ಹೈಕಮಾಂಡ್ ನಾಡಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದರು.
ರಾಜು ನಂದೆಪ್ಪನವರ(ದೇಸಾಯಿ), ಮಲ್ಲಿಕಾರ್ಜುನ ಸಾಬೋಜಿ, ಸಂಗಯ್ಯ ಅಮ್ಮಣಗಿಮಠ, ರಾಮಣ್ಣ ಹುಲಕುಂದ, ಮಾಳು ಹಿಪ್ಪರಗಿ, ರಾಜು ದೇಸಾಯಿ, ಚಿದಾನಂದ ಮಟ್ಟಿಕಲ್ಲಿ, ಭೀಮಶಿ ಪಾಟೀಲ, ಬಾಬು ಪಟೇಲ್, ಸುಜಿತ ದಾನಿಗೊಂಡ, ಸಾಗರ ಚವಜ, ಪ್ರಭು ಹಿಪ್ಪರಗಿ, ಸುಕುಮಾರ ಪಾಟೀಲ, ಜಗದೀಶ ಝಾರೆ, ಭರತೇಶ ಶಿರಹಟ್ಟಿ, ಹಳಿಂಗಳಿ ಸೇರಿದಂತೆ ಅನೇಕರಿದ್ದರು.