ಕಾಂಗ್ರೆಸ್‌ ಕುತಂತ್ರ ಫಲಿಸುವುದಿಲ್ಲ

ಭಗವಂತ ಖೂಬಾ
Advertisement

ಕೊಪ್ಪಳ: ಕಾಂಗ್ರೆಸ್ ಪಕ್ಷದವರ ಪ್ರಚೋದನೆಯಿಂದ ಒಳ ಮೀಸಲಾತಿ ವಿಚಾರಕ್ಕೆ ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ಎಸೆದಿದ್ದು, ಈ ಪೈಕಿ ಮೂವರು ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಕುತಂತ್ರ ಫಲಿಸುವುದಿಲ್ಲ. ಬದಲಿಗೆ ಅವರಿಗೆ ತಿರುಗುಬಾಣ ಆಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಾಗೂ ಗವಿಮಠಕ್ಕೆ ಭೇಟಿ ನೀಡಿ ಶುಕ್ರವಾರ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಕುತಂತ್ರವನ್ನು ಜನರು 75 ವರ್ಷಗಳಿಂದ ಅನುಭವಿಸಿದ್ದಾರೆ. ಒಳಮೀಸಲಾತಿ ನೀಡಬೇಕು ಎಂಬ ಬೇಡಿಕೆ ಬಲವಾಗಿತ್ತು. ಅಲ್ಲದೇ ದೊಡ್ಡ ಮಟ್ಟದ ಹೋರಾಟಗಳು ನಡೆದವು. ಹಾಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎದೆಗಾರಿಕೆ ತೋರಿಸಿ, ಒಳ ಮೀಸಲಾತಿ ನೀಡಿದ್ದಾರೆ. ಈ ಮೂಲಕ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸಿದ್ದಾರೆ. ಇದರ ಪ್ರತಿಫಲ ಚುನಾವಣೆಯಲ್ಲಿ ಸಿಗಲಿದೆ. ಇದನ್ನು ಸಹಿಸಿಕೊಳ್ಳಲು ಆಗದೇ ಕಾಂಗ್ರೆಸ್‌ನವರು ತುಷ್ಠಿಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದರು.