ನವದೆಹಲಿ: ನೀರಿನ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮೇಲೆ ಮಾತನಾಡಿದ ಅವರು 70 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು 8 ವರ್ಷದಲ್ಲಿ ಸಾಧ್ಯವಾಗಿವೆ ಎಂದು ಹೇಳಿದರು.
ತೇಜಸ್ವಿ ಸೂರ್ಯ ಕನ್ನಡದಲ್ಲೇ ಭಾಷಣ ಮಾಡಿದ್ದು ವಿಶೇಷವಾಗಿತ್ತು. ಸುದೀರ್ಘ ಭಾಷಣ ಮಾಡಿದ ಅವರು, ಚಿಕ್ಕಮಗಳೂರಿಗೆ ಚುನಾವಣೆ ಸ್ಪರ್ಧಿಸಲು ಇಂದಿರಾಗಾಂಧಿ ಬಂದಾಗ ರೈಲ್ವೆ ಬ್ರಾಡ್‍ಗೇಜ್, ಡಬ್ಲಿಂಗ್ ಭರವಸೆ ನೀಡಿದ್ದರು. ಆದರೆ ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಬಂದು ಹೋದರೂ ಅಭಿವೃದ್ಧಿಯಾಗಲಿಲ್ಲ. 30-40 ವರ್ಷ ಕಂಬಿನೇ ಇಲ್ಲದೇ ರೈಲು ಬಿಟ್ಟರು. ಆದರೆ ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ರೈಲ್ವೆ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಗತಿ ಪರ ಬಜೆಟ್ ಮಂಡಿಸಲಾಗಿದೆ: ಅಮೃತ್ ಕಾಲದಲ್ಲಿ ದೇಶದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ. ಕಳೆದ 8-9 ವರ್ಷಗಳಿಂದ ಕರ್ನಾಟಕಕ್ಕೆ ಹಲವು ಯೋಜನೆಗಳು ಮೋದಿ ಸರ್ಕಾರದಿಂದ ಸಿಕ್ಕಿದೆ. ಅದಕ್ಕಾಗಿ ನಾನು ಕರ್ನಾಟಕದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನರೇಂದ್ರ ಮೋದಿ ಅವರಿಂದ ಕರ್ನಾಟಕ ಸರ್ವಾಂಗೀಣ ಪ್ರಗತಿಯಾಗಿದೆ. ಕಳೆದ 8 ವರ್ಷದಲ್ಲಿ 4,000 ಕಿ.ಮೀಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. 1 ಲಕ್ಷ 16 ಸಾವಿರ ಕೋಟಿ ಯೋಜನೆಗಳನ್ನು ರಸ್ತೆಗೆ ನೀಡಿದೆ. ಬೆಂಗಳೂರಿನಿಂದ ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ನೀಡಿದೆ. 70 ವರ್ಷದಲ್ಲಿ ಆಗದ ಅಭಿವೃದ್ಧಿ 8 ವರ್ಷದಲ್ಲಿ ಆಗಿದೆ. ಇದರಿಂದ ಕರ್ನಾಟಕ ಜನರಿಗೆ ದೊಡ್ಡ ಉಪಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀರಿನ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ: ಆಲಮಟ್ಟಿ ಡ್ಯಾಂ ಮಟ್ಟ ಏರಿಸಲು ವಾಜಪೇಯಿ ಸರ್ಕಾರ ಅನುಮತಿ ನೀಡಿತ್ತು. ಈಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನರೇಂದ್ರ ನೀಡಿದ್ದಾರೆ. ಮಹದಾಯಿ ಯೋಜನೆಗೆ ಡಿಪಿಆರ್‍ಗೆ ಅನುಮತಿ ನೀಡಿದೆ. ಜಲ ಜೀವನ್ ಮಿಷನ್ ನಡಿ ಮನೆ ಮನೆಗೂ ನೀರು ನೀಡುವ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 24 ಲಕ್ಷ ಮನೆಗಳಿಗೆ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು. ಇಂದು 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಯಿಂದ ನೀರು ಬರುತ್ತಿದೆ ಎಂದರು.
ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೇ ವಲಯದಲ್ಲೂ ಸಾಕಷ್ಟು ಕ್ರಾಂತಿಯಾಗಿದೆ: ಯುಪಿಎ ಸರ್ಕಾರಕ್ಕಿಂತ ಎರಡು ಪಟ್ಟು ಡಬ್ಲಿಂಗ್ ಕೆಲಸ ನಮ್ಮ ಸರ್ಕಾರದಲ್ಲಿ ಆಗಿದೆ. ಈ ವರ್ಷ 7600 ಕೋಟಿ ರೂ. ಅನುದಾನ ಕರ್ನಾಟಕಕ್ಕೆ ನೀಡಿದೆ. 55 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸಲಾಗುತ್ತಿದೆ.
ಕಳೆದ 8 ವರ್ಷದಲ್ಲಿ ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಪ್ರತಿ 200-300 ಕಿ.ಮೀಗೆ ಒಂದರಂತೆ ಒಂಭತ್ತು ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನೀಡಿದೆ. ಕರಾವಳಿ ಪ್ರದೇಶದಲ್ಲಿ ಬಂದರುಗಳನ್ನು ಅಭಿವೃದ್ಧಿ ಮಾಡಿದೆ. ಮಂಗಳೂರು ಬಂದರು ಅಭಿವೃದ್ಧಿಗೆ 3,500 ಕೋಟಿ ನೀಡಿದೆ. ಏಷ್ಯಾದಲ್ಲಿ ಅತಿ ದೊಡ್ಡದು ಎನಿಸಿಕೊಂಡಿರುವ ಐಎನ್‍ಎಸ್ ಕಂದಬ ನೌಕಾ ನೆಲೆ ಪುನರುಜ್ಜೀವನಕ್ಕೆ 12,000 ಕೋಟಿ ಅಭಿವೃದ್ಧಿಗೆ ನೀಡಿದೆ ಎಂದು ಹೇಳಿದರು.
ಬೆಂಗಳೂರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಆದ್ಯತೆ ನೀಡಿದ್ದಾರೆ: ಸಬ್ ಅರ್ಬನ್ ರೈಲ್ವೆ ಯೋಜನೆ 40 ವರ್ಷದಿಂದ ಬಾಕಿ ಇತ್ತು. ಮೋದಿ ಅವರು 40 ತಿಂಗಳಲ್ಲಿ ಯೋಜನೆ ಪೂರ್ಣ ಮಾಡುವ ಆಶ್ವಾಸನೆ ನೀಡಿದ್ದರೆ ಅದಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಸರಿ ಮಾಡಲು ಮೆಟ್ರೋಗೆ ಆದ್ಯತೆ ನೀಡಿದೆ. 8 ವರ್ಷದ ಹಿಂದೆ 8 ಕಿ.ಮೀ ಮೆಟ್ರೋ ಮಾರ್ಗ ಇತ್ತು. ಈಗ 56 ಕಿ.ಮೀ ಮಾರ್ಗ ಹೊಂದಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣಕ್ಕೂ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೋದಿ ಸರ್ಕಾರ ನೀಡಿದೆ. 17,000 ಕೋಟಿ ಬೆಂಗಳೂರು ಹೊರವಲಯದ ರಿಂಗ್ ರಸ್ತೆಗೆ ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳ ಅಭಿವೃದ್ಧಿಗಾಗಿ ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಟ್ವಾಯ್ ಕ್ಲಸ್ಟರ್, ಟೆಕ್ಸಟೈಲ್ ಕ್ಲಸ್ಟರ್‌ಗಳನ್ನು ನಮ್ಮ ಸರ್ಕಾರ ನೀಡಿದೆ. ದೇಶದ ಮೊಲದ ಸೆಮಿ ಕಂಡಕ್ಟರ್ ಫ್ಯಾಬ್ ಯುನಿಟ್ ಅನ್ನು ಮೈಸೂರಿಗೆ ನೀಡಿದೆ ಎಂದು ಮಾಹಿತಿ ನೀಡಿದರು.