ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. 135 ಸ್ಥಾನ ಗಳಿಸಿದರೂ ಸುಗಮ ಆಡಳಿತ ನಡೆಸಲು ಆಗುತ್ತಿಲ್ಲ. ಶಾಸಕರು, ಸಚಿವರ ಅಸಮಾಧಾನ ಮುಂದುವರಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಬಿ.ಆರ್ ಪಾಟೀಲರು, ಮತ್ತೊಂದು ಕಡೆ ಬಸವರಾಜ ರಾಯರೆಡ್ಡಿ ತಮ್ಮ ಆಂತರಿಕ ನೋವು, ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಸಚಿವ ಸತೀಶ ಜಾರಕಿಹೊಳಿ ಶಾಸಕರ ಗುಂಪು ಕಂಟಿಕೊಂಡು ಪ್ರವಾಸ ಮಾಡುತ್ತಿದ್ದಾರೆ. ಇದರ್ಥ ಏನು? ಆಂತರಿಕ ಸಂಘರ್ಷ ತಣ್ಣಗಾಗಿಸಿ, ಸಂಭಾಳಿಸಿ ಮುನ್ನಡೆಸುವ ನಾಯಕತ್ವದ ಕೊರತೆ ಕಾಂಗ್ರೆಸ್ ಪಕ್ಷದಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿದರು.
ಸರ್ಕಾರ ರಚನೆ ಮಾಡಿ ಮೂರೇ ತಿಂಗಳಿಗೆ ಶಾಸಕರು ಅಸಮಾಧಾನ ಹೇಳಿಕೊಂಡರು. ಶಾಸಕಾಂಗ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದ್ದರು. ಈಗ ಅಂತರಿಕ ಬೇಗುದಿ ಅತಿರೇಕಕ್ಕೆ ಹೋಗಿದೆ ಎಂದು ಜೋಶಿ ಹೇಳಿದರು.