ಮಂಗಳೂರು: ರಾಜ್ಯದಲ್ಲಿ ಈ ಸಲ ಸಮ್ಮಿಶ್ರ ಸರಕಾರ ಇರುವುದಿಲ್ಲ. ಕಾಂಗ್ರೆಸ್ ಬಹುಮತದೊಂದಿಗೆ ಸ್ವತಂತ್ರವಾಗಿ ಸರಕಾರ ರಚಿಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತ ಪಡೆದು ಕಾಂಗ್ರೆಸ್ಸೇ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ. ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ವ್ಯಕ್ತಿತ್ವ ಬದಲಾಗಿದೆ ಎನ್ನುವ ಅಭಿಪ್ರಾಯ ದೇಶದಲ್ಲಿ ವ್ಯಕ್ತವಾಗಿದೆ. ಇವೆಲ್ಲದರ ಗುಣಾತ್ಮಕ ಪರಿಣಾಮ ಅಸೆಂಬ್ಲಿ ಚುನಾವಣೆ ಮೇಲೆ ಉಂಟಾಗಲಿದೆ. ರಾಹುಲ್ ಯಾತ್ರೆಯಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಹೊಸ ಚೈತನ್ಯ ಬಂದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಂಗಳೂರಿನಲ್ಲಿ ಹೇಳಿದರೆ ನಿಜ ಆಗುತ್ತದೆ ಎಂದರು.
ಆಪರೇಷನ್ ಕಮಲ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಹೀನ ಕೃತ್ಯ ನಡೆಸಿದ್ದರು. ಈಗ ಅಂತಹ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಆಂತರಿಕ ಚರ್ಚೆಗಳು ನಡೆಯುತ್ತಿದೆ. ಅದೇ ರೀತಿ ಶಾಸಕ ವಿಶ್ವನಾಥ್ ಕಾಂಗ್ರೆಸ್ ಪ್ರವೇಶ ಕೂಡ ಅಂತಿಮಗೊಂಡಿಲ್ಲ. ಕಾಂಗ್ರೆಸ್‌ನ ಪಕ್ಷ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬರಬೇಕಾದರೆ ಸ್ಥಳೀಯ ಕಾರ್ಯಕರ್ತರು, ಮುಖಂಡರ ವಿಶ್ವಾಸ ಪಡೆಯುತ್ತೇವೆ. ಸ್ಥಳೀಯರ ಅಭಿಪ್ರಾಯ ಕಡೆಗಣಿಸಿ ಪಕ್ಷ ಸೇರ್ಪಡೆ ಮಾಡುವುದಿಲ್ಲ. ಹಲವು ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರ ಕಡೆಗಣನೆ ಮಾಡುವುದಿಲ್ಲ ಎಂದರು.