ದಾವಣಗೆರೆ: ಕಾಂಗ್ರೆಸ್ಗೆ ಅವರೇ ವಲಸಿಗರಾಗಿರುವ ಸಿದ್ದರಾಮಯ್ಯಗೆ ಬಿಜೆಪಿಗೆ ಬಂದಿರುವ ವಲಸಿಗರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತುಳಿದು, ದೇವೇಗೌಡರನ್ನ ಅಡ್ಡಹಾಕಿ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಸಿದ್ದರಾಮಯ್ಯ ಕಾಂಗ್ರೆಸ್ಗೆ ವಲಸಿಗ, ಅವರಿಗೆ ವಲಸಿಗರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಅವರು ಈಗ ಕಾಂಗ್ರೆಸ್ನ್ನು ಮುಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೂಲ ಬಿಜೆಪಿಗರು ವಲಸಿಗ ಶಾಸಕರ, ಸಚಿವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಬೆಂಬಲವನ್ನೂ ಪಕ್ಷದಿಂದ ಕೊಡಲಾಗಿದೆ ಎಂದ ಅವರು, ಇನ್ನೆಷ್ಟು ಜನ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಸೀಮಿತ ಮೀರಿ ಹಣ ವ್ಯಯಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿ ಕಟೀಲು, ಅದು ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿಯದ್ದಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಚುನಾವಣೆ ವೆಚ್ಚ ನೋಡಿ ನಮಗೆ ಹಾಗಂದಿರಬೇಕು ಎಂದರು.
ದಲಿತ ಮುಖ್ಯಮಂತ್ರಿ ಎಂಬ ಚರ್ಚೆ ಹುಟ್ಟಿಹಾಕಿದ್ದು ಸಿದ್ದರಾಮಯ್ಯ, ತಡೆದಿದ್ದೂ ಕೂಡ ಅವರೆ ಎಂದು ಪ್ರಶ್ನೆಯೊಂದಕ್ಕೆ ಕುಟುಕಿದರು.
ಬಿಜೆಪಿಯಿಂದ ಹಮ್ಮಿಕೊಂಡಿರುವ ವಿಜಯಸಂಕಲ್ಪ ಅಭಿಯಾನ ಯಶಸ್ವಿಯಾಗಿ ಮುಂದುವರೆಯುತ್ತಿದ್ದು, ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ಕರಪತ್ರ ಹಂಚುವುದು, ಸರ್ಕಾರದ ಅಭಿವೃದ್ಧಿ ಕಾಮಗಾರಿ ತಿಳಿಸುವುದನ್ನು ಯಶಸ್ವಿಯಾಗಿ ಮಾಡಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ರಾಜ್ಯದಿಂದ ಸಿಕ್ಕಿದೆ. ಸದಸ್ಯತ್ವ ಆಗಿದೆ ಎಂದರು.
ಕಳೆದ ಜ.1 ರಿಂದ 9 ರವರೆಗೆ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನದಲ್ಲಿ 20 ಲಕ್ಷ ಮನೆಗೆ ಧ್ಚಜ ಹಾರಿಸಲಾಗಿತ್ತು. 42 ಸಾವಿರ ಪೇಜ್ ಕಮಿಟಿ ಮಾಡಿ ಯಶಸ್ವಿಯಾಗಿತ್ತು. ಈ ಚುನಾವಣೆ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.