ಮಂಡ್ಯ: ಮದ್ದೂರು ತಾಲೂಕಿನ ಪದಾಧಿಕಾರಿಗಳನ್ನು ಏಕಾಏಕಿ ಬದಲಾವಣೆ ಮಾಡಿರುವುದರ ವಿರುದ್ಧ ಪರಿಷತ್ ಸದಸ್ಯರು ಆಕ್ರೋಶಿಸಿ ಮಂಡ್ಯ ನಗರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಗದ್ದಲದ ಪರಿಸ್ಥಿತಿ ಉಂಟಾಗಿತ್ತು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಸಮ್ಮೇಳನದಲ್ಲಿ ಮದ್ದೂರು ತಾಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ, ವೇದಿಕೆ ಎದುರು ಧರಣಿ ನಡೆಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ದಿಢೀರ್ ಪ್ರತಿಭಟನೆಯಿಂದ ಸಮ್ಮೇಳನದ ಉದ್ಘಾಟನೆ ವೇಳೆ ಗದ್ದಲದ ಪರಿಸ್ಥಿತಿ ನಿರ್ಮಾಣಗೊಂಡು ಸಮ್ಮೇಳನದ ಉದ್ಘಾಟನೆಗೆ ಅಡೆತಡೆಯಾಯಿತು. ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರ ಸಾಹಸ ಪಟ್ಟರು.
ಸಮ್ಮೇಳನದ ಉದ್ಘಾಟನೆಯಲ್ಲಿ ಸ್ವಾಗತ ಭಾಷಣ ಮಾಡಲು ರವಿಕುಮಾರ್ ಚಾಮಲಾಪುರ ಮುಂದಾದಾಗ ಸಭಿಕರ ಸಾಲಿನಲ್ಲಿದ್ದ ಪರಿಷತ್ ಸದಸ್ಯರು ಕಪ್ಪು ಬಾವುಟ ಹಿಡಿದು ಧಿಕ್ಕಾರದ ಘೋಷಣೆ ಕೂಗುತ್ತಾ ವೇದಿಕೆಯತ್ತ ನುಗ್ಗಿದರು, ಪೊಲೀಸರು ತಡೆಯಲು ಮುಂದಾದಾಗ ಅದನ್ನ ಲೆಕ್ಕಿಸದೆ ವೇದಿಕೆ ಮುಂಭಾಗಕ್ಕೆ ತೆರಳಿ ಧರಣಿ ಕುಳಿತರು. ಪರಿಷತ್ನ ಜಿಲ್ಲಾಧ್ಯಕ್ಷ ಸಮ್ಮೇಳನದ ವೇದಿಕೆ ಮೇಲೆ ಕುಳಿತಿದ್ದಾಗ ನಮ್ಮನ್ನು ನೋಡಿ ಕಾಲು ಮೇಲೆ ಎತ್ತಿ ಚಪ್ಪಲಿ ತೋರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನೀಲ್,ಕಾರ್ಯದರ್ಶಿ ಹರ್ಷ ರನ್ನ ಪದಾಧಿಕಾರಿ ಸ್ಥಾನದಿಂದ ವಜಾ ಮಾಡುವ ಮೂಲಕ ಜಿಲ್ಲಾಧ್ಯಕ್ಷ ಸರ್ವಾಧಿಕಾರಿತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.