ಕಲ್ಯಾಣ ಕ್ರಾಂತಿಯ ರೂವಾರಿ ಮಲ್ಲಿಕಾರ್ಜುನ ಖರ್ಗೆಗೆ ಭವ್ಯ ಸ್ವಾಗತ

KARGE
Advertisement

ಕಲಬುರಗಿ: ಎಐಸಿಸಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ತವರೂರು ಕಲಬುರಗಿಗೆ ಆಗಮಿಸಿದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪಕ್ಷದ ಪದಾಧಿಕಾರಿಗಳು, ಗಣ್ಯರು ಅದ್ಧೂರಿಯಾಗಿ ಆತ್ಮೀಯವಾಗಿ ಸ್ವಾಗತಿಸಿದರು.
ಖರ್ಗೆ ಅವರನ್ನು ಬರ ಮಾಡಿಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಸುಮಾರು 11.00 ಗಂಟೆ ವೇಳೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇದಕ್ಕೂ ಮುನ್ನ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ವಿಶೇಷ ವಿಮಾನದ ಮೂಲಕ ಏರ್ ಪೋರ್ಟಿಗೆ ಬಂದಿಳಿದರು.
ಈ ಮಧ್ಯೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಲ್ಯಾಣ ಕ್ರಾಂತಿ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ಈಶ್ವರ ಖಂಡ್ರೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲಾ, ಮಾಜಿ ಸಚಿವ ಹಾಗೂ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ್ ಪಾಟೀಲ್, ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕ ಹಾಗೂ ಸಚೇತಕ ಡಾ.ಅಜಯ್ ಸಿಂಗ್, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಬಸವರಾಜ ರಾಯರೆಡ್ಡಿ, ಶಾಸಕ ರಹೀಂಖಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ್ ಮತ್ತಿತರ ಗಣ್ಯರು ವಿಮಾನ ನಿಲ್ದಾಣದಲ್ಲಿ ನಾಯಕ ಖರ್ಗೆಯವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.
ಟಿಕೆಟ್ ಆಕಾಂಕ್ಷಿಗಳ ದಂಡು
ಈ ಎಲ್ಲ ಬೆಳವಣಿಗೆಗಳ ಜೊತೆಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ನೂರಾರು ಪ್ರಮುಖರು ಸಹ ವಿಮಾನ ನಿಲ್ದಾಣಕ್ಕೆ ತೆರಳಿ, ಖರ್ಗೆಯವರಿಗೆ ಹೂಗುಚ್ಛ ನೀಡಿ ತಮ್ಮ ಅಲಿಖಿತ ಮನವಿ ಸಲ್ಲಿಸಿದರು. ಇನ್ನು, ಕಲಬುರಗಿ ವಿಮಾನ ನಿಲ್ದಾಣದಿಂದ ಮಲ್ಲಿಕಾರ್ಜುನ ಖರ್ಗೆಯವರಿದ್ದ ಕಾರಿನ ಹಿಂದೆ ಸುಮಾರು ಒಂದುವರೆ ಕಿಲೋಮೀಟರ್ ರವರೆಗೆ ಕಾಂಗ್ರೆಸ್ ಮುಖಂಡರ, ಶಾಸಕರ, ಮಾಜಿ ಸಚಿವರ ಹಾಗೂ ಪಕ್ಷದ ಹಲವು ಮುಖಂಡರ ಕಾರುಗಳು ಸಾಲುಗಟ್ಟಿ ಖರ್ಗೆಯವರ ವಾಹನವನ್ನು ಹಿಂಬಾಲಿಸಿದವು. ಹೀಗಾಗಿ, ಕೆಲ ಹೊತ್ತು ಸೇಡಂ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ನಗರದಲ್ಲಿ ಜಾತ್ರೆ ಸಂಭ್ರಮ ವಾತಾವರಣ
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಗರದ ಎಲ್ಲೆಡೆ ಕಾಂಗ್ರೆಸ್ ಬಾವುಟಗಳನ್ನು ಕಟ್ಟಲಾಗಿದೆ. ಇದರ ಜೊತೆಗೆ, ಹಿರಿಯ ನಾಯಕನ ಬೃಹತ್ ಕಟೌಟ್‍ಗಳನ್ನು ನಗರದಾದ್ಯಂತ ಕಟ್ಟಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಖರ್ಗೆಯವರನ್ನು ಅಭಿನಂದಿಸಲು ಕಲ್ಯಾಣ ಕ್ರಾಂತಿ ಸಮಾವೇಶ ಹಮ್ಮಿಕೊಂಡಿರುವ ಕೆಪಿಸಿಸಿ, ಈ ನಿಟ್ಟಿನಲ್ಲಿ ಕಲ್ಯಾಣ ಭಾಗದ ಜನರ ಋಣ ಸಂದಾಯಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅದ್ಧೂರಿ ಸ್ವಾಗತ
ಕಲಬುರಗಿ ವಿಮಾನ ನಿಲ್ದಾಣದಿಂದ ಮಲ್ಲಿಕಾರ್ಜುನ ಖರ್ಗೆಯವರು ನಗರೇಶ್ವರ ಶಾಲೆ ಎದುರಿನ ರಸ್ತೆಗೆ ಬರುತ್ತಿದ್ದಂತೆಯೇ ಅವರನ್ನು ತೆರೆದ ವಾಹನದ ಮೂಲಕ ಭವ್ಯ ಮೆರವಣಿಗೆಯಲ್ಲಿ ಜಗತ್ ವೃತ್ತದವರೆಗೆ ಕರೆ ತರಲಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂಮಳೆ ಸುರಿಸುವ ಮೂಲಕ ಖರ್ಗೆಯವರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ನೆರೆಯ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು, ಶಾಸಕರು ಹಾಗೂ ಮಾಜಿ ಸಚಿವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.