ಕಲಬುರಗಿ: ಬಹುನಿರೀಕ್ಷಿತ ಕಲಬುರಗಿ-ಬೀದರ್ ನಡುವಿನ ಇಂಟರ್‌ಸಿಟಿ ರೈಲು (ಡೆಮು ಟ್ರೇನ್ ನಂ. 07747) ಸಂಚಾರ ಸೇವೆ ಸೋಮವಾರ ಇಲ್ಲಿಂದ ಆರಂಭಗೊಂಡಿತು. ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಈ ರೈಲು ನಿತ್ಯವೂ ಸಂಚರಿಸಲಿದೆ.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಲೋಕಸಭಾ ಸದಸ್ಯ ಡಾ. ಉಮೇಶ ಜಿ. ಜಾಧವ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ರೈಲಿನಿಂದ ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಭಾಗದ ಜನರ ಬೇಡಿಕೆಯಂತೆ ಈ ಭಾಗದ ಮೂಲಕ ಸಂಚರಿಸುವ ಅಹ್ಮದಾಬಾದ್-ಚೆನ್ನೆ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಇನ್ನೂ ಕೆಲವು ಪ್ರಮುಖ ರೈಲುಗಳನ್ನು ಕಲಬುರಗಿ, ಶಹಾಬಾದ್ ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಇನ್ನೂ ಕೆಲ ರೈಲುಗಳನ್ನು ಸಹ ನಿಲುಗಡೆ ಮಾಡಲಾಗುವುದು ಎಂದರು.
ನಾಗರಕೋಯಿಲ್ ಎಕ್ಸ್‌ಪ್ರೆಸ್ ರೈಲು ಶಹಾಬಾದ್ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದೆ. ಹಾಗೆಯೇ ಸಿಕಂದ್ರಾಬಾದ್-ಮುಂಬೈ ರೈಲು ವಾಡಿ ನಿಲ್ದಾಣದಲ್ಲಿ ಹಾಗೂ ಯಶವಂತಪುರ-ಲಾತೂರ್ ಎಕ್ಸ್ಪ್ರೆಸ್ ರೈಲು ನಾಲವಾರ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಈ ಭಾಗದಲ್ಲಿ ಸಂಚರಿಸಲಿದೆ ಎಂದರು. ಅಮೃತ್ ಭಾರತ್ ಸ್ಟೇಷನ್ ಯೋಜನೆಗೆ ಕಲಬುರಗಿ ರೈಲ್ವೆ ನಿಲ್ದಾಣವನ್ನು ಆಯ್ಕೆ ಮಾಡಲಾಗಿದ್ದು, ಇದರಡಿ ಈ ನಿಲ್ದಾಣ ಆಧುನೀಕರಣಗೊಳ್ಳಲಿದೆ, ಇನ್ನಷ್ಟು ಸೌಲಭ್ಯಗಳು ಲಭ್ಯವಾಗಲಿವೆ ಎಂದು ಸಂಸದ ಡಾ. ಜಾಧವ ತಿಳಿಸಿದರು, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಸಂಸದ ಉಮೇಶ ಜಾಧವ ಅವರು ಚುನಾವಣೆ ವೇಳೆ ಭರವಸೆ ನೀಡಿದಂತೆ ಹೊಸ ರೈಲು ಆರಂಭಿಸಿದ್ದಾರೆ, ಅದೇ ರೀತಿ ಈ ಭಾಗದ ರೈಲ್ವೆ ಬೇಡಿಕೆಗಳ ಕುರಿತು ಸಂಸತ್ತಿನಲ್ಲಿ ಆಗಾಗ್ಗೆ ಪ್ರಸ್ತಾಪಿಸುತ್ತಿದ್ದು, ಪರಿಣಾಮವಾಗಿ ಜನರಿಗೆ ಸೌಲಭ್ಯಗಳು ಸಿಗುತ್ತಿವೆ ಎಂದರು. ಈ ಭಾಗದ ಜನರ ಅನುಕೂಲಕ್ಕಾಗಿ ಬೀದರ್‌ನಿಂದ ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕೆಂದು ಶಾಸಕ ಪಾಟೀಲ್ ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಮಧ್ಯ ರೈಲ್ವೆಯ ಸೋಲಾಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ನೀರಜ ಧವಳೆ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಝಡ್‌ಆರ್‌ಯುಸಿಸಿ ಸದಸ್ಯರಾದ ವಿಜಯಕುಮಾರ ಹಳಕರ್ಟಿ, ಅರವಿಂದ ನವಲಿ, ಮಾಜಿ ಕಾರ್ಪೋರೇಟರ್ ವಿಠ್ಠಲ ಜಾಧವ ಮತ್ತಿತರರು ಇದ್ದರು.