ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್ ಅಶೋಕ್ ಕಶ್ಯಪ್ ಅವರನ್ನು ನೇಮಕ ಮಾಡಿ, ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.
ಅಶೋಕ್ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ತಲೆದಂಡ ಸಿನಿಮಾಗೆ ಅಶೋಕ್ ಕಶ್ಯಪ್ ಅವರೇ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.