ಬೆಂಗಳೂರು: ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ (72) ಅವರು ಶುಕ್ರವಾರ ನಿಧನರಾದರು. ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಗಮನ ಸೆಳೆದ ವ್ಯಕ್ತಿಯಾಗಿದ್ದರು. ಗಣಿಗಾರಿಕೆ ವಿರುದ್ಧ ಸಮರವನ್ನೇ ಸಾರಿದ್ದರು. ಅಷ್ಟೇ ಅಲ್ಲದೆ ಅವರು ಹೈಕೋರ್ಟ್ ನ್ಯಾಯಮೂರ್ತಿ ಸೇವೆಯಲ್ಲಿದ್ದಾಗ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದರು. 1951ರ ಸೆಪ್ಟೆಂಬರ್ 5ರಂದು ಜನಿಸಿದ್ದ ಶೈಲೇಂದ್ರ ಕುಮಾರ್, 1976ನೇ ವರ್ಷದಲ್ಲಿ ಅವರು ವಕೀಲ ವೃತ್ತಿಯನ್ನು ಆರಂಭಿಸಿದ್ದರು. ನಂತರ ಅವರು ಕರ್ನಾಟಕ ಹೈಕೋರ್ಟ್ ಹಾಗೂ ಮದ್ರಾಸ್ ನಲ್ಲಿ ವಿಧ್ಯಾಭ್ಯಾಸ ನಡೆಸಿದರು. 2000ರ ಡಿಸೆಂಬರ್ ತಿಂಗಳಲ್ಲಿ ಶೈಲೇಂದ್ರ ಕುಮಾರ್ ಅವರು ಕರ್ನಾಟಕ ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾದರು. ನ್ಯಾಯಾಂಗದಲ್ಲಿ ಅವರು ದಿಟ್ಟತನ ಪ್ರದರ್ಶಿಸಿದ್ದ ವ್ಯಕ್ತಿ. ನ್ಯಾಯಾಧೀಶರಾದವರು ಯಾವುದನ್ನು ಮುಚ್ಚಿಡಬಾರದು. ಯಾವುದಕ್ಕೂ ಹೆದರಬಾರದು ಎನ್ನುತ್ತಿದ್ದರು. ಅವರು ಅಂದಿನ ಕರ್ನಾಟಕ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಪಿ.ಡಿ ದಿನಕರನ್ ಅವರ ಆಡಳಿತಾತ್ಮಕ ತೀರ್ಮಾನಗಳ ವಿರುದ್ಧ ಸಿಡಿದಿದ್ದರು. ಮಾತ್ರವಲ್ಲ ನ್ಯಾಯಾಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಮಾಡಬೇಕು ಎಂದು ಹೇಳಿದ್ದರಲ್ಲದೇ ತಮ್ಮ ಆಸ್ತಿ ಘೋಷಣೆ ಮಾಡಿದ್ದರು. ಇವರು ಇದೀಗ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.