ಬಾಗಲಕೋಟೆ: ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದೇನೆ. ಉತ್ತರ ಕರ್ನಾಟಕದಲ್ಲಂತೂ ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಮಹತ್ವ ದೊರಕುತ್ತಿದ್ದು, ಈ ಬಾರಿ ಕರ್ನಾಟಕ ರಾಜ್ಯದ ಜನತೆ ಆಪ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಚೇರಿಯಲ್ಲಿ ತೇರದಾಳ ಕ್ಷೇತ್ರದ ಆಪ್ ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಕಟ್ಟಕಡೆಯ ಮತದಾರ ಆಮ್ ಆದ್ಮಿ ಪಕ್ಷದ ವಿಶ್ವಾಸ ಹಾಗು ದೆಹಲಿಯಲ್ಲಿ ಮಾಡಿದ ಕಾರ್ಯಗಳಿಗೆ ಆಶೀರ್ವದಿಸಿ ಸರ್ಕಾರ ಮಾಡುವುದರ ಜೊತೆಗೆ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ್ದಾರೆ. ಇದೇ ಮಾದರಿ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು.
ಸರ್ಕಾರ ರೂಪಿಸಲು ಯಾವುದೇ ತಂತ್ರಗಾರಿಕೆ ಬೇಕಿಲ್ಲ. ಪ್ರಾಮಾಣಿಕ ಹಾಗು ಜನತೆಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ರೈತರಿಗೆ ಒಳಿತಾಗುವ ಕಾರ್ಯದಲ್ಲಿ ತೊಡಗುವಲ್ಲಿ ಆಪ್ ನಿಸ್ಸೀಮವಿದೆ. ಇದೊಂದು ವಿಶ್ವಾಸದಿಂದ ಸರ್ಕಾರ ನಿಶ್ಚಿತವಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದು, ಹೊಸ ಪ್ರಯೋಗದಲ್ಲಿ ವಿನೂತನ ಸಾಧನೆ ಆಪ್ ಮಾಡಲಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾನ್, ಆಪ್ನಿಂದ ಮುಖ್ಯಮಂತ್ರಿಯನ್ನಾಗಿ ಯಾರನ್ನೂ ಚುನಾವಣಾ ಮುನ್ನ ಘೋಷಿಸಿಲ್ಲ. ಬದಲಾಗಿ ಬಡವರ ಪಕ್ಷವಾಗಿರುವ ಇಲ್ಲಿ ಅತ್ಯಂತ ಸಾಮಾನ್ಯ ಹಾಗು ಕಟ್ಟಕಡೆಯ ಮನುಷ್ಯನೂ ಮುಖ್ಯಮಂತ್ರಿಯಾಗುವ ಹಕ್ಕು ಇಲ್ಲಿ ಮಾತ್ರವಿದೆ ಎಂದರು.