ಬೆಳಗಾವಿ: ಕಿತ್ತೂರು ಉತ್ಸವಕ್ಕೆ ಮುನ್ನವೇ ಪ್ರತಿಟನ್ ಕಬ್ಬಿಗೆ 5500 ರೂ. ದರ ನಿಗದಿಪಡಿಸಿ ಸರ್ಕಾರ ಆದೇಶಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಗಾಗಿ ವಿವಿಧ ಕಡೆಗಳಿಂದ ಬರುತ್ತಿದ್ದ ರೈತರನ್ನು ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿಯೇ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆದಿದೆ.
ಇನ್ನು ಬೆಳಗಾವಿಗೆ ಬಂದಿದ್ದ ರೈತರು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಅವರನ್ನು ಗೇಟಿನ ಬಳಿಯಲ್ಲಿಯೇ ತಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಸುವರ್ಣಸೌಧದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೈತರಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಅವಕಾಶ ನೀಡಲಿಲ್ಲ.
ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಕ್ಕರೆ ಸಚಿವರು ಸಭೆ ಕರೆಯುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟಿದ್ದರು. ಆದರೆ ನಂತರ ಸಚಿವರು ಸಭೆಯನ್ನು ಬೆಂಗಳೂರಿನ ಬದಲು ಬೆಳಗಾವಿಯಲ್ಲಿಯೇ ಕರೆಯಬೇಕೆಂದು ಅವರು ಒತ್ತಾಯಿಸಿದರು. ಆಪ್ ಸೇರಿದಂತೆ ಕೆಲ ಪಕ್ಷಗಳೂ ರೈತರಿಗೆ ಸಾಥ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಇಂದು ಮತ್ತೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ಕಿತ್ತೂರು ಉತ್ಸವದ ಆಚರಣೆಗೆ ಮುನ್ನ ರೈತರ ಮನವಿಯನ್ನು ಸರ್ಕಾರ ಪೂರೈಸಿ, ಪ್ರತೀ ಟನ್ ಕಬ್ಬಿಗೆ 5500 ದರ ನಿಗದಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.