ಕಬ್ಬರಗಿ ಬಳಿ ಬಾವಿಯಲ್ಲಿ ಬಿದ್ದಿದ್ದ ಕತ್ತೆಕಿರುಬ ರಕ್ಷಣೆ

ಕತ್ತೆಕಿರುಬ
Advertisement

ಕೊಪ್ಪಳ: ಕುಷ್ಟಗಿ ತಾಲೂಕಿನ ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಬಳಿ ಬಾವಿಯಲ್ಲಿ ಬಿದ್ದಿದ್ದ ಕತ್ತೆಕಿರುಬ (ಹೈನಾ) ಪ್ರಾಣಿಯನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
ಆಹಾರ ಅರಸಿ ಆಗಮಿಸಿದ್ದ ಕತ್ತೆಕಿರುಬ ಪ್ರಾಣಿಯು ಕಬ್ಬರಗಿ ಗ್ರಾಮದ ದಮ್ಮೂರ ರಸ್ತೆಯ ಬಳಿಯ ಬಾವಿಯೊಂದರಲ್ಲಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಗದಗ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕತ್ತೆಕಿರುಬಕ್ಕೆ ಅರವಳಿಕೆ ಮದ್ದು ನೀಡಿ ಜ್ಞಾನ ತಪ್ಪಿದ ನಂತರ ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ನಂತರ ಚಿಕಿತ್ಸೆ ನೀಡಿ ಗದಗ ಪ್ರಾಣಿ ಸಂಗ್ರಹಾಲಯಕ್ಕೆ ಒಪ್ಪಿಸಿದ್ದಾರೆ.
ವಲಯ ಅರಣ್ಯ ಅಧಿಕಾರಿ ಚೈತ್ರಾ ಮೆಣಸಿನಕಾಯಿ, ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಪಶು ವೈದ್ಯಾಧಿಕಾರಿ ನಿಖಿಲ್, ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ಎನ್., ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ, ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.