ಬೆಂಗಳೂರು : ಕನ್ನಡಕ್ಕೆ ನಮ್ಮ ಸರ್ಕಾರ ಅತಿ ಹೆಚ್ಚು ಮಹತ್ವ ನೀಡಿದ್ದು, ಕನ್ನಡದ ವಿಚಾರದಲ್ಲಿ ಸರ್ಕಾರ ರಾಜಿಯಾಗಿಲ್ಲ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಕ್ಷಣಾ ವೇದಿಕೆ ಇವರ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ( ಕರವೇ-25) ಬೆಳ್ಳಿಹಬ್ಬ ಸಂಭ್ರಮ ಮತ್ತು ಕರ್ನಾಟಕ ಸಾಂಸ್ಕøತಿಕ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರು ಕ್ಯಾತೆ ತೆಗೆದಾಗ ಗಟ್ಟಿಯಾಗಿ ನಮ್ಮ ನಿಲುವು ಸ್ಪಷ್ಟ ಪಡಿಸಲಾಗಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಪೂರ್ಣಗೊಳಿಸಲಾಗಿದೆ. ವಿಧಾನ ಸೌಧದ ಮುಂಭಾಗದಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಮೂರ್ತಿ ಸ್ಥಾಪನೆಯಾಗುತ್ತಿದೆ. ಕನ್ನಡಿಗರ ಇತಿಹಾಸ, ಸಾಹಿತ್ಯ, ಆಡಳಿತ, ಪರಂಪರೆ , ಸಂಸ್ಕೃತಿಯ ಪ್ರತಿಬಿಂಬವಾಗಿರುವ ಇಬ್ಬರೂ ಕನ್ನಡದ ಹೆಮ್ಮೆ. ಕನ್ನಡಕ್ಕಾಗಿ ಉದ್ಯೋಗ ನೀತಿ ರೂಪಿಸಿ ಎ, ಬಿ, ಸಿ.ಡಿ ಹುದ್ದೆಗಳಲ್ಲಿ ಶೇ 80 ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.
ಕರವೇ ಕಟ್ಟುವ ಸಾಹಸ
ಕರವೇ ಅಧ್ಯಕ್ಷ ನಾರಾಯಣ ಗೌಡರ ಪಯಣ ಸುಲಭವಾಗಿರಲಿಲ್ಲ. ಕನ್ನಡದ ಕಂಪನ್ನು ಹರಡಲು, ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಸಾಹಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಹಲವು ಸಂಘ ಸಂಸ್ಥೆಗಳ ಪಯಣ ದೂರದವರೆಗೆ ಸಾಗೋಲ್ಲ. ಕನ್ನಡಕ್ಕೆ ಆಪತ್ತು ಬಂದಾಗ ಒಬ್ಬ ನಾರಾಯಣ ಗೌಡ ಪ್ರಾರಂಭಿಸಿದ ಕ್ರಾಂತಿ ನಿರಂತರವಾಗಿ ನಡೆಯುತ್ತಿದೆ ಎಂದರು.
ಪ್ರಾಮಾಣಿಕ ಹೋರಾಟ
ಜಾತಿ, ಮತ ಬೇಧಭಾವವಿಲ್ಲದೆ ಕನ್ನಡದ ಕುಲ, ಧರ್ಮ, ಸರ್ವಸ್ವ ಎಂದು ಕನ್ನಡಕ್ಕಾಗಿ ನಾರಾಯಣಗೌಡರು ಮೀಸಲಿಟ್ಟಿದ್ದಾರೆ . ಹಲವಾರು ಚಳವಳಿಗಳಲ್ಲಿ ಭಾಗವಹಿಸಿ, ಪೊಲೀಸ್ ಪ್ರಕರಣ, ಲಾಠಿ ಏಟು ತಿಂದರೂ ಅವರು ಗಟ್ಟಿಯಾಗಿ ನಿಂತವರು. ಕನ್ನಡದ ಹಂಗಿನಲ್ಲಿ ಕೆಲಸ ಮಾಡಿದರು. 25 ವರ್ಷ ಕನ್ನಡ ರಕ್ಷಣೆ ಮಾಡಿದ್ದಾರೆ. ಇನ್ನೂ 25 ವರ್ಷ ಅವರ ನೇತೃತ್ವದಲ್ಲಿ ಕನ್ನಡ ದ ನೆಲ ಜಲ, ಜನರ ರಕ್ಷಣೆ ಮಾಡಬೇಕು ಎಂದರು. ಒಂದು ವ್ಯವಸ್ಥೆಯಲ್ಲಿ ಎಚ್ಚರಿಕೆ ನೀಡುವ ಇನ್ನೊಂದು ವ್ಯವಸ್ಥೆ ಇರಬೇಕು. ಆಗ ಆಡಳಿತಗಾರರು ಜಾಗೃತರಾಗುತ್ತಾರೆ. ನಾರಾಯಣಗೌಡರ ಪಾತ್ರ ಕಾವೇರಿ, ಕೃಷ್ಣ ಹೋರಾಟದಲ್ಲಿ ಪ್ರಾಮಾಣಿಕವಾಗಿ ಹೋರಾಡಿದ್ದಾರೆ. ಅವರ ಛಲ, ಕಿಚ್ಚು, ಶಕ್ತಿ ಗುರುತಿಸಲಾಗಿದೆ. ಇವರ ಕೈಯಲ್ಲಿ ಕನ್ನಡಾಂಬೆ ಅತ್ಯಂತ ಸುರಕ್ಷಿತವಾಗಿ ದ್ದಾಳೆ ಎಂದರು.