ಕನ್ನಡದ ಕವಿ ಹಾಗೂ ವಿಮರ್ಶಕ ಕೆ.ವಿ. ತಿರುಮಲೇಶ್ ನಿಧನ

ತಿರುಮಲೇಶ್
Advertisement

ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್‌ (82) ಇನ್ನಿಲ್ಲ. ಅವರು ಹೈದರಾಬಾದ್‌ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು.
ಹೃದಯ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆ ಡಿಸ್‌ಚಾರ್ಜ್‌ ಆಗಿ ಮನೆಗೆ ಬಂದಿದ್ದರು. ಅವರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ಕೆ.ವಿ. ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕ. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು.
ಕೇರಳದ ಕಾಸರಗೋಡಿನ ಕಾರಡ್ಕ‌ ಗ್ರಾಮದಲ್ಲಿ ತಿರುಮಲೇಶ್ ಜನಿಸಿದ್ದರು. ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನ ಹೊರತಂದಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿ ಬರೆದಿದ್ದರು. ಬೇಂದ್ರೆಯವರ ಕಾವ್ಯಶೈಲಿ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ವಿಮರ್ಶಾ ಕೃತಿ ರಚಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು. ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು.