ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ಮ್ಯಾಚುರಿಟಿ ಇಲ್ಲ, ಅವರು ರಾಜಕೀಯ ವಿದೂಷಕ ಇದ್ದಂಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಜಮಖಂಡಿ ಹಾಗೂ ಮುಧೋಳ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಅವರು ನಾಗನೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಏಕೆ ಮೌನವಾಗಿತ್ತು? ಭ್ರಷ್ಟಾಚಾರ ಆರೋಪದ ಬಗ್ಗೆ ಯಾಕೆ ಪ್ರಸ್ತಾಪ ಮಾಡಲಿಲ್ಲ? ಇವರ ಬಾಯಲ್ಲಿ ಕಡಬು ಸಿಕ್ಕಿತ್ತಾ ಎಂದರು. ನಮ್ಮ ಕಾಲದ್ದೂ ಸೇರಿ 17 ವರ್ಷದ್ದೂ ತನಿಖೆ ಮಾಡಿಸಿ ಅಧಿವೇಶನದಲ್ಲಿಯೇ ಹೇಳಿದ್ದೇನೆ ಅದಕ್ಕೆ ಉತ್ತರ ನೀಡದೆ ಬೊಮ್ಮಾಯಿ ಸರಕಾರ ಈಗ ಜಾತಿ ವಿಷಯ ಮಾಡುತ್ತಿದೆ ಎಂದು ಆಪಾದಿಸಿದರು.
ನಾವು ಸಿಎಂ ಮತ್ತು ಸರಕಾರದ ಮೇಲೆ ಆರೋಪ ಮಾಡುತ್ತಿದ್ದೇವೆ ವಿನಃ ಜಾತಿ ಮೇಲಲ್ಲ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದರು. ಹಿಂದೆ ನಮ್ಮ ಸರಕಾರವನ್ನು ಶೇ. 10 ಸರಕಾರ ಎಂದು ಮೋದಿ ಲೇವಡಿ ಮಾಡಿದರು. ಆವಾಗ ಯಾವ ದಾಖಲೆ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.
ಮೋರ್ ಸ್ಟ್ರಾಂಗ್ ಮೋರ್ ಎನಮೀಸ್ ಲೆಸ್ ಸ್ಟ್ರಾಂಗ್, ನೋ ಎನಮೀಸ್ ಎಂಬಂತೆ ಬಿಜೆಪಿ ವರ್ತಿಸುತ್ತಿದೆ, ನನ್ನ ಕಂಡರೆ ಇವರಿಗೆ ಭಯ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತೇನೆ ಎಂದರು. ಕೋರ್ಟ್ ಮಾಡಿದೆ ವಿನಃ ಇವರಲ್ಲ ಲೋಕಾಯುಕ್ತರ ಬಗ್ಗೆ ಇವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಲೋಕಾಯುಕ್ತ ಅಧಿಕಾರಿ ಮಗನೇ ಲಂಚ ಪಡೆಯುತ್ತಿದ್ದ ಅದಕ್ಕೆ ನಾವು ಎಸಿಬಿಗೆ ಹೆಚ್ಚು ಪವರ್ ಕೊಟ್ಟಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.