ಹುಬ್ಬಳ್ಳಿ: ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ ಬಳಿ ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಕ್ಷರಿಗೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ, ಹಿಂದೆ ಸರಿಯಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಆಪ್ಷನ್ ಓಪನ್ ಇವೆ. ಕಾಂಗ್ರೆಸ್‌ನ ಮುಖಂಡರು ಯಾರೂ ಸಂಪರ್ಕಿಸಿಲ್ಲ, ಆದರೆ ಪ್ರತಿನಿಧಿ ಕಳಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಮೋದಿ, ಅಮಿತ್ ಷಾಗೆ ಗ್ರೌಂಡ್ ಲೇವಲ್ ಏನು ನಡೀತಿದೆ ಗೊತ್ತಿಲ್ಲ.ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದರು.
ಕೆಲವರ ಹಿತಕ್ಕಾಗಿ ಬಿಜೆಪಿ ಬಲಿಕೊಡ್ತಾ ಇದ್ದಾರೆ. ಹಿರಿಯರಿಗೆ ಗೌರವ ಕೊಡದೆ ಇರುವುದು ಬಿಜೆಪಿಗೆ ಮುಳುವಾಗುತ್ತದೆ.
ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ ಎಂದರು.
ಶೆಟ್ಟರ್ ಜೊತೆ ತೆರಳಿದ ಬೆಂಬಲಿಗರು:
ಹುಬ್ಬಳ್ಳಿಯಿಂದ ಶಿರಸಿಯತ್ತ ಪ್ರಯಾಣ ಬೆಳೆಸಿದ ಶೆಟ್ಟರ್ ಅವರೊಂದಿಗೆ ಕೆಲವು ಬೆಂಬಲಿಗರ ಜೊತೆಗೆ ಶಿರಸಿ ಕಡೆ ಹೊರಟಿದ್ದಾರೆ.
ಬೆಳ್ಳಂಬೆಳಗ್ಗೆ ಶೆಟ್ಟರ್ ಮನೆಗೆ ಆಗಮಿಸಿರೋ ಟಿಕೆಟ್ ವಂಚಿತ ತವನಪ್ಪ ಅಷ್ಟಗಿ ಭೇಟಿ ನೀಡಿದ್ದಾರೆ. ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ತೆರಳಿದರು.
ಕಾಂಗ್ರೆಸ್ ಸೇರ್ಪಡೆ?
ರಾಜಿನಾಮೆ ನಂತರ ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಇಂದು ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.