ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮವನ್ನು ಒಂದು ಸಾಗರ ಹಾಗೂ ನಾಲ್ಕು ನದಿಗಳಲ್ಲಿ ಅರ್ಪಿಸಲಾಗುವುದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಪ್ರಕಟಿಸಿದರು.
ಸಿದ್ದೇಶ್ವರ ಸ್ವಾಮೀಜಿಯನ್ನು ಸ್ಮರಿಸುವ ಮೂಲಕ ಸುದ್ದಿಗಾರರೊಂದಿಗೆ ಮಾತು ಆರಂಭಿಸಿದ ಶ್ರೀಗಳು, ಶ್ರೀಗಳ ಆಶಯದಂತೆ ಅವರ ಪಾರ್ಥೀವ ಶರೀರವನ್ನು ಸಾಗರ ಅಥವಾ ನದಿಯಲ್ಲಿ ಬಿಡಲಾಗುತ್ತದೆ. ಯಾವ ಸಾಗರ, ಯಾವ ನದಿ ಎಂಬುದನ್ನು ಸುತ್ತೂರ ಶ್ರೀಗಳು ಹಾಗೂ ಕನೇರಿ ಶ್ರೀಗಳು ನಿರ್ಧರಿಸುತ್ತಾರೆ. ಅವರ ನಿರ್ಧಾರದಂತೆ ಸ್ವಾಮೀಜಿಗಳ ಐದು ತಂಡ ರಚಿಸಿ ಈ ಕಾರ್ಯ ನೆರವೇರಿಸುವ ಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು.
ಭಕ್ತರಿಗೆ ಭಸ್ಮವನ್ನು ಒದಗಿಸಲು ಸಾಧ್ಯವಿಲ್ಲ. ಅದರ ಬದಲಿಗೆ ಸಿದ್ದೇಶ್ವರ ಶ್ರೀಗಳನ್ನು ಭಕ್ತಿಯಿಂದ ನೆನೆದು ವಿಭೂತಿ ಖರೀದಿ ಮಾಡಿ ಅದನ್ನು ಮನೆಗೆ ಹೋಗಿ ಹಚ್ಚಿಕೊಳ್ಳಬೇಕು. ಅದರಲ್ಲಿಯೂ ಶ್ರೀಗಳು ಇದ್ದಾರೆ. ಅದರ ಜೊತೆಗೆ ಗ್ರಂಥವನ್ನು ಒಯ್ಯಬೇಕು. ಅವರ ಆಶಯಗಳನ್ನು ಪಾಲಿಸಬೇಕು ಎಂದು ಶ್ರೀಗಳು ಕರೆ ನೀಡಿದರು.