ಐಸ್ ಕ್ರೀಮ್ ದಾಸ್ತಾನು ಘಟಕದಲ್ಲಿ ಬೆಂಕಿ ಅವಘಡ 4 ಕೋಟಿ ರೂ. ನಷ್ಟ

Advertisement

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಐಸ್ ಕ್ರೀಮ್ ಘಟಕದಲ್ಲಿ ಕಳೆದ ರಾತ್ರಿ ಬೆಂಕಿ ಅವಘಡ ಸಂಭವಿಸಿ ಸುಮಾರು ೪ ಕೋಟಿಯಷ್ಟು ನಷ್ಟ ಉಂಟಾಗಿದೆ.
ಘಟಕದಲ್ಲಿ ದಾಸ್ತಾನಿದ್ದ ೧ ಕೋಟಿಗೂ ಅಧಿಕ ಮೌಲ್ಯದ ಐಸ್ ಕ್ರೀಮ್, ೩ ಶೈತ್ಯಾಗಾರಗಳು ಹಾಗೂ ಶೈತ್ಯಾಗಾರ ಘಟಕ ಅಳವಡಿಸಿದ್ದ ಒಂದು ವಾಹನವು ಬೆಂಕಿಗಾಹುತಿಯಾಗಿದೆ. ಈ ಬೆಂಕಿ ಅವಘಡದಿಂದ ಸುಮಾರು ೪ ಕೋಟಿಗಳಷ್ಟು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕಾಸರಗೋಡಿನಿಂದ ಕಾರವಾರದವರೆಗೆ ಕರಾವಳಿ ಜಿಲ್ಲೆಯ ವಿತರಕರಿಗೆ ಈ ಘಟಕದ ಮೂಲಕವೇ ಕೆಎಂಎಫ್ ನಂದಿನಿ ಬ್ರಾಂಡ್ ನ ಐಸ್ ಕ್ರೀಮ್ ಅನ್ನು ತಲುಪಿಸಲಾಗುತ್ತಿತ್ತು. ಐಸ್ ಕ್ರೀಂ ತಿನ್ನಲು ಬಳಸುವ ಚಮಚಗಳನ್ನೂ ಈ ಘಟಕದಲ್ಲೇ ತಯಾರಿಸಲಾಗುತ್ತಿತ್ತು. ೧೮ ವರ್ಷಗಳಿಂದ ಈ ಘಟಕವು ಕಾರ್ಯಾಚರಿಸುತ್ತಿದೆ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಮಧ್ಯರಾತ್ರಿ ೨ರ ವೇಳೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಘಟಕದಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ.
ಮೂರು ಅಗ್ನಿಶಾಮಕ ವಾಹನಗಳು ಸುಮಾರು ೪ ಗಂಟೆಗಳ ಅವಿರತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದವು.