ಐದೂವರೆ ಗಂಟೆ ಕಡ್ಡಾಯವಾಗಿ ಶಾಲೆ ನಡೆಸಿ ಶಿಕ್ಷಣ ಇಲಾಖೆ ಸೂಚನೆ

School
Advertisement

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಖಾಸಗಿ ಶಾಲೆಗಳು ಪ್ರತಿ ದಿನ ಐದೂವರೆ ಗಂಟೆ ಮತ್ತು ಶನಿವಾರ ಅರ್ಧ ದಿನ ಶಾಲೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಅದರಡಿ ರಚಿತವಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ಪಠ್ಯಕ್ರಮ, ನಿಯಂತ್ರಣ ಮತ್ತು ಇತರೆ ಕಾಯ್ದೆ-೧೯೯೫ರಲ್ಲಿ ನಿಯಮಗಳನ್ನು ಜಾರಿಗೊಳಿಸಿದ್ದು, ಈ ನಿಯಮಗಳ ಪ್ರಕಾರ ಪ್ರತಿ ದಿನ ಐದೂವರೆ ಗಂಟೆ ಶಾಲೆಗಳನ್ನು ಕಡ್ಡಾಯವಾಗಿ ನಡೆಸಬೇಕಿದೆ.
ಆದರೆ, ರಾಜ್ಯದಲ್ಲಿರುವ ಕೆಲವು ಖಾಸಗಿ ಶಾಲೆಗಳು ನೋಂದಣಿ ಮತ್ತು ಮಾನ್ಯತೆಯನ್ನು ಸರ್ಕಾರದಿಂದ ಪಡೆದು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮನಬಂದಂತೆ ಶಾಲೆಗಳನ್ನು ಆರಂಭ ಮಾಡುತ್ತಿದ್ದಾರೆ. ಈ ಸಂಬಂಧ ಪೋಷಕರು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ದೂರುಗಳನ್ನು ಪರಿಶೀಲಿಸಲು ಇಲಾಖೆಯ ಬಿಇಒ, ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಸೂಚನೆ ನೀಡಲಾಗಿದೆ.