ಧಾರವಾಡ: ಧಾರವಾಡದ ಐಐಟಿ ಸ್ಥಾಪನೆ ನಮ್ಮ ಸರ್ಕಾರದ ಧ್ಯೇಯವಾದ `ಸಂಕಲ್ಪ ಸೇ ಸಿದ್ಧಿ’ ಬದ್ಧತೆಗೆ ಸಾಕ್ಷಿಯಾಗಿದೆ. ನಾಲ್ಕು ವರ್ಷಗಳ ಹಿಂದೆ ಶಿಲಾನ್ಯಾಸ ಮಾಡಿ ಹೋಗಿದ್ದೆ. ಈಗ ಅದನ್ನು ಉದ್ಘಾಟನೆ ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಧಾರವಾಡ ನಗರದ ಹೊರ ವಲಯದ ಚಿಕ್ಕಮಲ್ಲಿಗವಾಡ ಸಮೀಪ ಧಾರವಾಡ ಐಐಟಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭ ಹಾಗೂ ಇನ್ನಿತರ ಸಾಕಷ್ಟು ಅಡಚಣೆಗಳು ಎದುರಾದರೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪರಿಣಾಮ ನಾವು ಶಿಲಾನ್ಯಾಸ ಮಾಡಿದ್ದನ್ನು ನಾವೇ ಉದ್ಘಾಟನೆ ಮಾಡುತ್ತಿದ್ದೇವೆ. ಕ್ಯಾಂಪಸ್ ಉದ್ಘಾಟನೆ ದುಪ್ಪಟ್ಟು ಖುಷಿ ತಂದಿದೆ ಎಂದರು.
ಶಿಲಾನ್ಯಾಸ ಮಾಡುವುದು ಬಳಿಕ ಮರೆತು ಬಿಟ್ಟು ಬಿಡುವುದನ್ನು ಈ ಮೊದಲು ನೀವು ಕಾಣುತ್ತಿದ್ದೀರಿ. ಈಗ ಆ ಕಾಲ ಹೋಗಿದೆ. ದಿನಗಳು ಬದಲಾಗಿವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶವ್ಯಾಪಿ ಎಲ್ಲ ಹಂತದ ಶಿಕ್ಷಣಕ್ಕೆ ವ್ಯಾಪಕ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತೆಯೇ ದೇಶವ್ಯಾಪಿ ಹೊಸದಾಗಿ ನಮ್ಮ ಸರ್ಕಾರವು 250 ಮೆಡಿಕಲ್ ಕಾಲೇಜು. ನೂರಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುಮತಿ ನೀಡಿದೆ. ಧಾರವಾಡದಲ್ಲಿ ಐಐಟಿ ಸ್ಥಾಪನೆ ಮಾಡಿದ ರೀತಿ ದೇಶದ ಇನ್ನೂ ಅನೇಕ ಕಡೆಗಳಲ್ಲಿ ಇಂತಹ ಐಐಟಿ ಸ್ಥಾಪನೆ ಮಾಡಲಾಗುವುದು. ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಲಭಿಸಬೇಕು ಎಂಬ ಪೋಷಕರ ಕನಸನ್ನು ನಮ್ಮ ಸರ್ಕಾರ ಸಾಕಾರಗೊಳಿಸಲು ಅನೇಕ ಸುಧಾರಣಾ ಕ್ರಮಗಳು ಅಳವಡಿಸಿದೆ ಎಂದು ವಿವರಿಸಿದರು.
ಕರ್ನಾಟಕ ಎಂದರೆ ಬರೀ ಸಾಫ್ಟವೇರ್, ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲೂ ಅದು ಪ್ರಗತಿಯ ಹೆಜ್ಜೆಗಳನ್ನು ಇರಿಸಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.