ಕೋಲಾರ: ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಜನತೆಗೆ ಸತ್ಯ ತಿಳಿಸಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಏಪ್ರಿಲ್ 5ರಂದು ಕೋಲಾರಕ್ಕೆ ಆಗಮಿಸಿಲಿದ್ದಾರೆಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಭಾಷಣದಲ್ಲಿ ಮೋದಿ ಜನಾಂಗ ಕಳ್ಳರು ಎಂಬ ಪದ ಬಳಿಸಿದ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದು, ಇದರ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ಕೊಡಿಸಲಾಗಿದೆ. ಸಣ್ಣ ವಿಚಾರವನ್ನು ಇಟ್ಟುಕೊಂಡು ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಅಪಮಾನ ಮಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ದೇಶ ತಲೆ ತಗ್ಗಿಸುವಂತೆ ಮಾಡಿದೆಯೆಂದರು.
ರಾಹುಲ್ ಗಾಂಧಿಯವರು ದೇಶದ ಏಕತೆಗಾಗಿ ಭಾರತ್ ಜೋಡೋ ನಡೆಸಿದ ಮೇಲೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುವುದನ್ನು ಸಹಿಸಲಾಗದೆ ಭಯಗೊಂಡಿರುವ ಬಿಜೆಪಿ ಪಕ್ಷದ ಮುಖಂಡರುಗಳು ರಾಹುಲ್ ಗಾಂಧಿಯವರನ್ನು ಜೈಲಿಗೆ ಕಳುಹಿಸಿ ಕಾಂಗ್ರೆಸ್‌ನ ವರ್ಚಸ್ಸನ್ನು ಕಡಿಮೆಗೊಳಿಸಲು ಚಿಂತನೆ ನಡೆಸಿ ತಮಗೆ ಅನುಕೂಲ ಇರುವ ನ್ಯಾಯಾಧೀಶರ ಮೂಲಕ ಎರಡು ವರ್ಷ ಶಿಕ್ಷೆಗೆ ಒಳಪಡಿಸಿ ನ್ಯಾಯಾಲಯದ ಆದೇಶ ಬರುವುದಕ್ಕೆ ಮೊದಲೇ ಲೋಕಸಭೆ ಸ್ಪೀಕರ್ ಮೇಲೆ ಒತ್ತಡ ಹಾಕಿ ರಾಹುಲ್ ಗಾಂಧಿಯವರನ್ನು ಸಂಸದರ ಸ್ಥಾನದಿಂದ ಅನರ್ಹತೆ ಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರಲ್ಲದೆ ಕೇರಳದ ವಯನಾಡಿನಲ್ಲಿ ಉಪ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದು ಈ ಎಲ್ಲಾ ಘಟನೆಗಳ ಬಗ್ಗೆ ದೇಶದ ಅನೇಕ ರಾಜಕೀಯ ಮುಖಂಡರುಗಳು ಖಂಡಿಸಿದ್ದಾರೆಂದರು.
ರಾಹುಲ್ ಗಾಂಧಿ ಅನರ್ಹ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಮಾವೇಶ ಮಾಡುವಂತೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಸೂಚನೆ ನೀಡಿದ್ದು, ಅದರಂತೆ ಎಪ್ರಿಲ್ 5ರಂದು ಕೋಲಾರದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯದ ಮುಖಂಡರು ಭಾಗವಹಿಸುವುದಾಗಿ ತಿಳಿಸಿದರು.