ಏಳನೇ ತರಗತಿವರೆಗೆ ಕನ್ನಡದಲ್ಲಿ ಶಿಕ್ಷಣ ಕಡ್ಡಾಯವಾಗಲಿ

ದೊಡ್ಡರಂಗೇಗೌಡ
Advertisement

ಹಾವೇರಿ: `ಏಳನೇ ತರಗತಿಯವರೆಗೆ ಕನ್ನಡದಲ್ಲಿಯೇ ಶಿಕ್ಷಣ ಆಗಬೇಕು. ಕನ್ನಡ ಶಿಕ್ಷಣ ಕಡ್ಡಾಯ ಮಾಡಬೇಕು…. ಯಾಕೆಂದರೆ ಕನ್ನಡ ಎಂದರೆ ನಮ್ಮ ತಾಯಿ ಇದ್ದ ಹಾಗೆ. ಆ ತಾಯಿ ತೊಡೆ ಮೇಲೆ ಮಗು ದೇಶಿ ಭಾಷೆ ಕಲಿಯುವಾಗ ಇರುವ ಸಂಭ್ರಮ ಎಲ್ಲೂ ಇರಲು ಸಾಧ್ಯವಿಲ್ಲ….’
ಇವು ಶುಕ್ರವಾರದಿಂದ ಮೂರು ದಿನ ಇಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ದೊಡ್ಡರಂಗೇಗೌಡ ಅವರ ನುಡಿಗಳು.
ಸಮ್ಮೇಳನದ ಮುನ್ನಾ ದಿನವಾದ ಗುರುವಾರ ಸಂಜೆ ನಗರಕ್ಕೆ ಆಗಮಿಸಿದ ಅವರನ್ನು ಸಾಹಿತ್ಯ ಅಭಿಮಾನಿಗಳು, ಕನ್ನಡ ಅಭಿಮಾನಿಗಳು ಸಡಗರದಿಂದ ಬರಮಾಡಿಕೊಂಡರು. ಬಳಿಕ ಜಿಲ್ಲಾಧಿಕಾರಿ ನಿವಾಸಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ನಾಡಿನ ಮಕ್ಕಳಿಗೆ ಕನ್ನಡದಲ್ಲಿಯೇ ಆರಂಭಿಕ ೭ ವರ್ಷ ಶಿಕ್ಷಣ ಆಗಬೇಕು ಎಂಬುದನ್ನು ಪ್ರತಿಪಾದಿಸಿದರು.
ಭೌತಶಾಸ್ತ್ರ, ಯೋಮ ವಿಜ್ಞಾನ ಎಲ್ಲವನ್ನೂ ಕನ್ನಡದಲ್ಲಿ ಹೇಳಲು ಸಾಧ್ಯವಿದೆ. ಇದು ಡಿಜಿಟಲೈಜೇಶನ್ ಕಾಲ. ಆದರೆ, ಕನ್ನಡ ಎಂದರೆ ಮೂಗು ಮುರಿಯಬಾರದು. ಕನ್ನಡದಿಂದಲೂ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯವಿದೆ. ಕನ್ನಡ ಕಲಿತರೆ ಕೆಲಸ ಸಿಗಲ್ಲ ಅನ್ನುವ ಭಾವನೆ ಬಿಡಬೇಕು ಎಂದು ಪ್ರತಿಪಾದಿಸಿದರು.