ಅದೊಂದು ಕಾಲವಿತ್ತು. ಏಡ್ಸ್ ಹೆಮ್ಮಾರಿ ಒಬ್ಬನಿಗೆ ಅಂಟಿತೆಂದರೆ ಇಡೀ ಊರು, ಸಮಾಜ, ಸ್ನೇಹಿತರು, ಬಂಧುಗಳು ಎಲ್ಲರ ಅಂತ್ಯ ಸನ್ನಿಹಿತ ಎನ್ನುವ ಭಯ ಆವರಿಸಿತ್ತು. ಆತನ ಬದುಕೋ ನರಕಸದೃಶ. ಏಡ್ಸ್‌ಗೆ ಚಿಕಿತ್ಸೆ ಇಲ್ಲ. ಔಷಧಿ ಇಲ್ಲ. ಆತ ಮಾಡಬಾರನ್ನು ಮಾಡಿ, ಅನೈತಿಕ ವ್ಯವಹಾರಕ್ಕಿಳಿದ. ಅನೈತಿಕವಾಗಿ ತಾನೇ ಕಂಟಕ ತಂದುಕೊಂಡ. ಅಲ್ಲದೇ ಹೆಂಡತಿ-ಮಕ್ಕಳು-ಸಮಾಜಕ್ಕೆಲ್ಲ ಕಳಂಕ ಅಂಟಿಸಿದ ಎಂಬ ಶಾಪ ಸರ್ವವ್ಯಾಪಿಯಾಗಿತ್ತು.
ಆಗ ಇಡೀ ವಿಶ್ವವೇ ಏಡ್ಸ್ ಮಾರಿಯಿಂದ ಬಚಾವಾಗುವುದು ಹೇಗೆ ಎನ್ನುವ ಚಿಂತನೆಯಲ್ಲಿ ಮುಳುಗಿತ್ತು. ವೈದ್ಯರು, ತಜ್ಞರು, ಸಮಾಜ ಚಿಂತಕರು ಬದುಕಿನ ಅಭ್ಯುದಯವನ್ನು ಬಯಸುವವರೆಲ್ಲ ಈ ಏಡ್ಸ್‌ಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬಂತೆ ಕೈಚೆಲ್ಲಿದರು.
ನಿಜಕ್ಕೂ ಈಗ ಭಾರತವಷ್ಟೇ ಅಲ್ಲ. ವಿಶ್ವವೇ ಹೆಮ್ಮೆ ಪಡುವ ಮಹತ್ಸಾಧನೆ ಏಡ್ಸ್ ನಿಯಂತ್ರಿಸುವಲ್ಲಿ ಸಾಫಲ್ಯ ಕಂಡು ಕೊಳ್ಳಲಾಗಿದೆ. ಜನರ ಜನರ ನಡುವೆ, ಸಮಾಜ-ದೇಶಗಳ ನಡುವೆ ಅಪನಂಬಿಕೆಯನ್ನು ಹುಟ್ಟುಹಾಕಿ ಏಡ್ಸ್ ಈಗ ವಿಶ್ವಾಸ-ಧೈರ್ಯಗಳಿಂದಲೇ ಸಾಕಷ್ಟು ವಿಜಯ ಸಾಧಿಸಿದೆ.
ಬದುಕಿನ ನಡೆನುಡಿ ಎಲ್ಲವೂ ಈ ಏಡ್ಸ್ ಹಬ್ಬಲು ಕಾರಣವೇ..? ಈಗ ಕೊರೊನಾ ಕಂಡೆವಲ್ಲ? ಅದಕ್ಕಿಂತಲೂ ಭಯ, ಭೀತಿ ಹಾಗೂ ಮನುಷ್ಯ ಮನುಷ್ಯರ ನಡುವಿನ ಸಂಬಂಧವನ್ನೇ ಈ ಗುಹ್ಯ ರೋಗ ಹದಗೆಡೆಸಿಬಿಟ್ಟಿತೆ? ಔಷಧಿಯೂ ಇಲ್ಲ. ಚಿಕಿತ್ಸೆಯೂ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಸಿ, ಏಡ್ಸ್ ಬಂದವ ಮಾನಸಿಕವಾಗಿ ಕುಗ್ಗಿ, ಜೀವಂತ ಇರುವಾಗಲೇ ಬದುಕಿಗೆ ವಿದಾಯ ಹೇಳುವ ಸ್ಥಿತಿಯನ್ನು ನಮ್ಮ ವೈದ್ಯಕೀಯ ಲೋಕವು ಸೃಷ್ಟಿ ಮಾಡಿತ್ತಲ್ಲ…!? ಸುದೈವವಶಾತ್ ಅಂತಹ ಕಾಲವನ್ನು ದಾಟಿ ಏಡ್ಸ್ ಕುರಿತು ನಿಚ್ಚಳ ಅರಿವಿನ ಹಂತದಲ್ಲಿ ಈಗ ನಾವಿದ್ದೇವೆ.
ಕೊರೊನಾ ಬಂದ ತಕ್ಷಣ ಹೇಗೆ ಭಯಗೊಂಡಿರೋ, ಸಾವು ನಿಶ್ಚಿತ ಎಂದು ತಿಳಿದು ಪಿಪಿಇ ಕಿಟ್ಸ್ ಮತ್ತು ಕ್ವಾರಂಟೈನ್ ಬದುಕಿನೊಂದಿಗೆ ಔಷಧಿ ಚಿಕಿತ್ಸೆ-ಉಪಚಾರ ನೀಡುವ ವಾರ್ಡುಗಳು ತಲೆ ಎತ್ತಿದವೋ, ಏಡ್ಸ್ ಬಂದಾಗ ಅಬ್ಬರವಿಲ್ಲದಿರೂ ಅದಕ್ಕಿಂತಲೂ ಭೀಕರವಾದ ಭಯವನ್ನು ಹುಟ್ಟಿಸಿತ್ತು. ಜನರ ಜಾಗೃತಿ, ಸಮಾಜದ ನಡುವಿನ ತಪ್ಪು ಕಲ್ಪನೆಗಳು ನಿಧಾನವಾಗಿ ಕರಗುತ್ತ ಬಂದಂತೆ ಈಗ ೨೦೩೦ರ ಅವಧಿಗೆ ಏಡ್ಸ್ ಮುಕ್ತ ಭಾರತ' ಘೋಷಣೆ ಹಂತಕ್ಕೆ ಬಂದು ನಿಂತಿದ್ದೇವೆ. ಇಷ್ಟಾಗಿಯೂ ಪ್ರಸ್ತುತ ವರದಿಯಂತೆ ೨೧ ಲಕ್ಷ ಭಾರತೀಯರಲ್ಲಿ ಏಡ್ಸ್ ಇದೆ. ನಗರ ಪ್ರದೇಶ, ದೇಶದ ಯುವಕರು, ಮಹಿಳೆಯರು, ವೇಶ್ಯಾವಾಟಿಕೆ, ಲೈಂಗಿಕ ಕಾರ್ಯಕರ್ತರು, ಸಲಿಂಗ ಕಾಮಿಗಳ ನಡುವೆ ಈ ಏಡ್ಸ್ ಬದುಕಿಕೊಂಡಿದೆ. ಡಿಸೆಂಬರ್ ೧ ವಿಶ್ವ ಏಡ್ಸ್ ದಿನವನ್ನು ಜನರ ಜಾಗೃತಿಗೋಸ್ಕರ ಆಚರಿಸಲಾಗುತ್ತಿದೆ. ಇಂದು ೩೪ನೇ ವಿಶ್ವ ಏಡ್ಸ್ ದಿನ. ಈ ಮೂವತ್ತನಾಲ್ಕು ವರ್ಷಗಳಲ್ಲಿ ಏಡ್ಸ್ ಹೊಡೆದೋಡಿಸುವ ಹಂತಕ್ಕೆ, ಅದರಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ ಸಾಕಷ್ಟು ಧಾಪುಗಾಲನ್ನು ಇಡಲಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಏಡ್ಸ್ ನಿಯಂತ್ರಣ ಕಾಯ್ದೆ ತಂದು ಏಡ್ಸ್ ಪೀಡಿತ ಜನರ ಸಾಮಾಜಿಕ ಮತ್ತು ಬದುಕಿನ ಭದ್ರತೆಯ ಭರವಸೆಯನ್ನು ನೀಡಲಾಗಿದೆ. ಅಂದರೆ ಏಡ್ಸ್ ಇದ್ದವರು ಕೂಡ ಜನಸಾಮಾನ್ಯರಂತೆ ಸಹಜವಾಗಿ ಬದುಕು ಸಾಗಿಸಬೇಕು. ಯಾವುದೇ ಅಸ್ಪೃಶ್ಯತೆ, ಕಳಂಕ ಮತ್ತು ಮಾನಸಿಕವಾಗಿ ಇವರನ್ನು ಕುಗ್ಗಿಸುವ ಯತ್ನಗಳು ನಡೆಯಬಾರದು ಎಂಬುದು ಏಡ್ಸ್ ತಡೆಗಟ್ಟುವ ನಿಯಂತ್ರಣ ಕಾಯ್ದೆಯ ಉದ್ದೇಶ. ಭಾರತ ೨೦೧೪ರಲ್ಲಿಯೇ ಈ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರೂ, ಅದು ಲೋಕಸಭೆ ಅಂಗೀಕಾರ ಪಡೆದು, ರಾಷ್ಟ್ರಪತಿ ಮುದ್ರೆ ಪಡೆದು ಗೆಝೆಟ್ ಅಂಗೀಕಾರ ಆಗಿದ್ದು ೨೦೧೭ರಲ್ಲಿ. ಈ ಕಾಯ್ದೆಗೆ ಸಾಕಷ್ಟು ಬಲವಿದೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲವೇಕೆ? ಎನ್ನುವುದು ಈ ವಿಶ್ವ ಏಡ್ಸ್ ದಿನದ ಪ್ರಶ್ನೆ. ೨೦೧೯ರ ಸುಮಾರು ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಧಾರವಾಡ ತಾಲ್ಲೂಕಿನ ನರೇಂದ್ರ-ಮೊರಬ ಗ್ರಾಮಗಳಲ್ಲಿ ಏಡ್ಸ್ ಶಂಕಿತ ವ್ಯಕ್ತಿಗಳಿಬ್ಬರು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಸತ್ತ ವ್ಯಕ್ತಿಯಿಂದ ಸೋಂಕು ಜನರಿಗೆ ಬರಬಾರದು ಎಂದು ಎರಡೂ ಕೆರೆಗಳ ನೀರನ್ನು ನಾಲ್ಕಾರು ದಿನ ನೂರಾರು ಪಂಪ್‌ಸೆಟ್‌ಗಳನ್ನು ಹಚ್ಚಿ ಖಾಲಿ ಮಾಡಿದರು! ವೈದ್ಯರು, ಪರಿಣಿತರು, ಸಾಮಾಜಿಕ ಕಾರ್ಯಕರ್ತರು ಸತ್ತ ವ್ಯಕ್ತಿಯಿಂದ ರೋಗಾಣು ಹರಡಲ್ಲ ಎಂದು ಪರಿಪರಿ ತಿಳಿಹೇಳಿದರೂ ಊರ ಜನ ಒಪ್ಪಲಿಲ್ಲ. ತುಮಕೂರಿನ ಗಡಿ ಪ್ರದೇಶದಲ್ಲಿ ಏಡ್ಸ್ ಶಂಕಿತನೊಬ್ಬನನ್ನು ಗುಡಿಸಲು ಕಟ್ಟಿ ದೂರ ಇಡಲಾಯಿತು. ಕಾಡು ಮಧ್ಯ ವರ್ಷಾನುಗಟ್ಟಲೇ ಹೀಗೆ ಇಡಲಾಗಿತ್ತು. ಹಾಗೆಯೇ ಏಡ್ಸ್ ಶಂಕಿತ ಕುಟುಂಬಗಳನ್ನು ಬಹಿಷ್ಕರಿಸಿದ, ಅನ್ನಾಹಾರ ನಿರಾಕರಿಸುವ ಹಲವು ಉದಾಹರಣೆಗಳು ಇನ್ನೂ ದೇಶಾದ್ಯಂತ ಕೇಳಿ ಬರುತ್ತಿವೆ. ಏಡ್ಸ್ ನಿಯಂತ್ರಣ ಕಾಯ್ದೆಯ ಪ್ರಮುಖ ಉದ್ದೇಶ, ಏಡ್ಸ್ ತಗುಲಿದ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡುವುದು. ಈಗಂತೂ ಚಿಕಿತ್ಸೆ ಇದೆ. ಸುರಕ್ಷೆಯಿದೆ. ಸೌಲಭ್ಯಗಳೂ ಇವೆ. ಜನಜಾಗೃತಿ ಇದೆ. ಏಡ್ಸ್ ಮಹಿಳೆ ಗರ್ಭವತಿಯಾದರೂ ಮಗುವಿಗೆ ಸೋಂಕು ತಗುಲದಂತೆ ಕಾಪಾಡುವ ಔಷಧಗಳಿವೆ. ಹಾಗೇ ತಗುಲಿದವರನ್ನು ದೀರ್ಘಾವಧಿಯವರೆಗೆ ಉಳಿಸಿಕೊಳ್ಳುವ ಔಷಧಿಗಳೂ ಇವೆ. ಈ ಹಿಂದೆ ಕೊರೊನಾ ಅವಧಿಯಲ್ಲಿ ಕೆಲವು ಆಸ್ಪತ್ರೆಗಳು, ವೈದ್ಯಕೀಯ ಲೋಕ ಹೇಗೆಲ್ಲ ದೋಚಿತೋ ಅದೇ ರೀತಿ ಏಡ್ಸ್ ಹೆಮ್ಮಾರಿ ವ್ಯಾಪಿಸತೊಡಗಿದಾಗ ಇದೇ ವೈದ್ಯಕೀಯ ಲೋಕ ಔಷಧಿ, ಚಿಕಿತ್ಸೆ ಹೆಸರಿನಲ್ಲಿ ಸಾಕಷ್ಟು ದೋಚಿದ್ದಿದೆ. ಜೊತೆಗೆ ಮಾಟ-ಮಂತ್ರ, ಜ್ಯೋತಿಷಿಗಳು, ನಾಟಿ ವೈದ್ಯರು ಏಡ್ಸ್ ಚಿಕಿತ್ಸೆ ನೀಡುವ ಬೃಹತ್ ಜಾಲವನ್ನೇ ಹೆಣೆದುಬಿಟ್ಟಿರು. ಅಕ್ರಮ ವೈದ್ಯಕೀಯ ದಂಧೆ ನಡೆಸುವವರೆಲ್ಲ ಆಗ ದೋಚಿದ್ದೇ ದೋಚಿದ್ದು. ಇವೆಲ್ಲವುಗಳ ಶೋಷಣೆ ತಪ್ಪಿಸಲೇ ಏಡ್ಸ್ ನಿಯಂತ್ರಣ ಕಾಯ್ದೆಯಲ್ಲಿ ಸ್ಪಷ್ಟವಾದ ಅಧಿಕಾರವಿದೆ. ಶಿಕ್ಷೆ ಇದೆ. ಆದರೆ ೨೦೧೭ರಲ್ಲಿ ಈ ಕಾಯ್ದೆ ಅಂಗೀಕಾರವಾದರೂ ಈವರೆಗೆ ಒಂದೇ ಒಂದು ಪ್ರಕರಣ ದೇಶದಲ್ಲಿ ದಾಖಲಾಗಿಲ್ಲ. ಹಾಗಂತ ಏಡ್ಸ್ ವ್ಯಾಪಿಸಿಲ್ಲ, ಏಡ್ಸ್ ಪೀಡಿತರು ಅಪಮಾನಿತರಾಗಿಲ್ಲ ಎಂದಲ್ಲ. ನರೇಂದ್ರ-ಮೊರಬದಂತಹ ನೂರಾರು ಪ್ರಕರಣಗಳು ನಡೆದದ್ದು ನಮ್ಮ ಕಣ್ಣ ಮುಂದಿದೆ. ಹಾಗಿದ್ದೂ ಹಲ್ಲಿಲ್ಲದ ಕಾಯ್ದೆಯಾಯಿತೇ? ಅಥವಾ ನಾಮಾಕೆವಾಸ್ತೆಯಾಗಿ ಇದು ಉಳಿಯಿತೇ? ಉತ್ತರ ಕರ್ನಾಟಕದಲ್ಲಿ ಏಡ್ಸ್ ಬಗ್ಗೆ ೩೩ ವರ್ಷಗಳಿಂದ ಜಾಗೃತಿ ಮೂಡಿಸುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಅಪಾರ ಯತ್ನ ಮಾಡುತ್ತಿರುವ ಡಾ.ಭರತರಾಜ್ ಯಾಳಗಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಒಂದು ಪ್ರಸ್ತಾವನೆಯನ್ನು ಮಂಡಿಸಿದರು. ಅದೆಂದರೆ ಮದುವೆಯಾಗುವ ವ್ಯಕ್ತಿಗಳು ಎಚ್‌ಐವಿ ಪ್ರಮಾಣ ಪತ್ರ ಪಡೆಯಬೇಕು ಎಂದು. ಈ ಖಾಸಗಿ ಮಸೂದೆಯನ್ನು ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲ ಮಂಡನೆ ಮಾಡಿದರೂ ಸಹ ಅದನ್ನು ಕೇಂದ್ರಕ್ಕೆ ರವಾನಿಸುವ ಭರವಸೆಯೊಂದಿಗೆ ಉಳಿಸಲಾಯಿತು. ಹೌದು. ೨೦೧೭ರಲ್ಲಿ ತಂದಿರುವ ಏಡ್ಸ್ ನಿಯಂತ್ರಣ ಕಾಯ್ದೆಯಲ್ಲಿ ಈ ಅಂಶ ಇಲ್ಲ. ಬಹುಶಃ ಈ ಕಡ್ಡಾಯ ಷರತ್ತು ಇದ್ದಿದ್ದರೆ ಹಲವು ಅಮಾಯಕರು ಮದುವೆ ನಂತರ ಗೋಳಾಡುವುದು, ಸಂಕಷ್ಟ ಪಡುವುದು ತಪ್ಪುತ್ತಿತ್ತು. ಅವರ ಬದುಕಿನಲ್ಲಿ ವಿಪ್ಲವಗಳು ಆಗುತ್ತಿರಲಿಲ್ಲ. ಇನ್ನೂ ಕೂಡ ಕಾಲ ಮಿಂಚಿಲ್ಲ. ಜನರ ಸಂರಕ್ಷತೆ ದೃಷ್ಟಿಯಿಂದ ಅಂತಹ ಒಂದು ಕಡ್ಡಾಯ ಅಗತ್ಯವೇನೋ? ನೈತಿಕತೆ ಮತ್ತು ಸಾಮಾಜಿಕ ಕಳಕಳಿ ಪ್ರೀತಿ-ಬಾಂಧವ್ಯ ಉಳಿಸಿಕೊಂಡಿರುವ, ಧಾರ್ಮಿಕ ಕಟ್ಟುಪಾಡು ಚೌಕಟ್ಟಿರುವ ಈ ದೇಶದಲ್ಲಿ ಮುಕ್ತ ಲೈಂಗಿಕತೆಗೆ ಅವಕಾಶ ಇಲ್ಲ. ಹಾಗೆಯೇ ಸಾಕಷ್ಟು ಮರ್ಯಾದೆ, ಮಾನದ ಅಡಿಯಲ್ಲಿ ಬದುಕುತ್ತಿರುವುದರಿಂದ ಲೈಂಗಿಕತೆ ಬಗ್ಗೆ ಜಾಗೃತಿಯೂ ಇಲ್ಲ. ಹೈಸ್ಕೂಲ್ ಮಟ್ಟದಲ್ಲಿಯೇ, ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಪಾಠ ನೀಡಬೇಕು ಎನ್ನುವ ಒತ್ತಾಸೆ-ಸಲಹೆ ಬಹಳ ವರ್ಷಗಳಿಂದಲೂ ಇದೆ. ಮನುಷ್ಯನ ದೇಹ ರಚನೆ, ಅದರ ಪರಿವರ್ತನೆಗಳು, ಪ್ರಚೋದನೆಗಳೆಲ್ಲವುಗಳ ಕುರಿತು ರಚನಾತ್ಮಕ ಪಾಠಗಳಿರಬೇಕೆಂದು ಹಲವು ಸಾರೆ ಪ್ರತಿಪಾದಿಸಲಾಗಿದೆ. ಆದರೆ ಲೈಂಗಿಕತೆಯನ್ನು ಕಪ್ಪೆ ಚಿಪ್ಪಿನ ಒಳಗಿಟ್ಟು, ಅದೊಂದು ಮುಜುಗರದ, ಮುಕ್ತ ಚರ್ಚೆ ಮಾಡಬಾರದ ವಿಷಯ ಎನ್ನುವುದು ನಮ್ಮಲ್ಲಿನ ಒಳ ಮನೋಭಾವ ಆಗಿರುವುದರಿಂದಲೇ ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ಇದು ಕುತೂಹಲದ ಮತ್ತು ಆಕರ್ಷಣೆಯ ಜೊತೆಗೆ, ಕದ್ದು ಮುಚ್ಚಿ ನಡೆಯುವ ಕ್ರಿಯೆಯಾಗಿ ಪರಿಣಮಿಸಿದೆ!. ಹಾಗಾಗಿ ಈ ಜಿಜ್ಞಾಸೆಗೆ ಒಂದು ತಾರ್ಕಿಕ ಅಂತ್ಯ ದೊರೆತರೆ ಇದರಲ್ಲಿ ಸಾಕಷ್ಟು ಪರಿವರ್ತನೆಯಾದೀತು. ೨೦೩೦ರ ಹೊತ್ತಿಗೆ ಭಾರತವನ್ನು ಏಡ್ಸ್ ಮುಕ್ತ ಮಾಡುವ ಘನ ಉದ್ದೇಶ ಹೊಂದಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಮೂಲತಃ ಏಡ್ಸ್ ಶಂಕಿತರಲ್ಲಿ ಮಾನಸಿಕ ಸ್ಥೈರ್ಯ- ಧೈರ್ಯ, ಜೀವನ ಎಲ್ಲವನ್ನೂ ತುಂಬಬೇಕೆಂಬ ಧೋರಣೆಯಿಂದ ಅಂಥವರ ಚಿಕಿತ್ಸೆಗೆ ನೆರವು, ಪರಿಹಾರ ಧನ, ಪಿಂಚಣಿ ಅಲ್ಲದೇ ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಪ್ರಾಧಾನ್ಯತೆ ಸುರಕ್ಷತೆಯನ್ನು ನೀಡಬೇಕು ಎಂದು ನಿರ್ದೇಶಿಸಿದೆ. ಅನ್ನ-ಆಹಾರ, ಧವಸ-ಧಾನ್ಯ, ಪಿಂಚಣಿಯನ್ನೇನೋ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಬಂದು ಹೋಗುವವರಿಗೆ ವಾಹನ ಸೌಲಭ್ಯದ ವ್ಯವಸ್ಥೆಯನ್ನೂ ಉಚಿತವಾಗಿ ಮಾಡಲಾಗುತ್ತಿದೆ. ಆದರೆ ಅವರೂ ಕೂಡ, ಮಹಿಳೆಯರಿರಲಿ, ಪುರುಷರಿರಲಿ, ತಾವು ಏಡ್ಸ್ ಪೀಡಿತರೆಂದು ಮುಕ್ತವಾಗಿ ಹೇಳಿಕೊಳ್ಳಲು ಸಿದ್ಧರಿಲ್ಲ. ಆದ್ದರಿಂದ ಈ ರೀತಿಯ ಪ್ರಮಾಣಪತ್ರ ಪ್ರದರ್ಶನಕ್ಕೆ ಹಿಂಜರಿಕೆ ವ್ಯಾಪಕವಾಗಿದೆ. ಏಡ್ಸ್ ಸಾಕಷ್ಟು ಬದಲಾವಣೆಯನ್ನು ತಂದಿದೆ. ಹೇಗೆಂದರೆ, ದೇಶಾದ್ಯಂತ ವ್ಯಾಪಿಸಿ ವೇಶ್ಯಾವಾಟಿಕೆ ಅಡ್ಡೆಗಳು, ಕಾಮಾಟಿಪುರದಂತಹ ಪ್ರದೇಶಗಳು, ಹೈಫೈ ಸೆಕ್ಸ್ ದಂಧೆಗಳು ಎಲ್ಲವೂ ಕೂಡ ಕೆಳಸ್ತರಕ್ಕೇನೋ ಬಂದಾಗಿವೆ. ಲೈಂಗಿಕ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿದೆ. ಸುರಕ್ಷಿತ ಲೈಂಗಿಕತೆ ಮತ್ತು ಚಿಕಿತ್ಸೆ, ಆರೋಗ್ಯ ತಪಾಸಣೆ ಎಲ್ಲವೂ ಕೂಡ ಈಗ ಎಲ್ಲರಲ್ಲೂ ಕಂಡುಬರುತ್ತಿವೆ. ವೈದ್ಯಕೀಯ ಕ್ಷೇತ್ರ ಕೂಡ ಈ ವಿಷಯದಲ್ಲಿ ಬದಲಾವಣೆ ಮಾಡಿಕೊಂಡಿದೆ. ಏಡ್ಸ್ ನಿಯಂತ್ರಿಸಲು ಪ್ರಮುಖವಾಗಿ ಬೇಕಾಗಿರುವುದು ನೈತಿಕ ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯ-ಭದ್ರತೆ. ಇದೇ ಹಿನ್ನೆಲೆಯಲ್ಲಿ ೨೦೨೨ರ ಡಿಸೆಂಬರ್ ೧ರ ವಿಶ್ವ ಏಡ್ಸ್ ದಿನಾಚರಣೆಯ ಘೋಷವಾಕ್ಯವೂ ಕೂಡ
ಪ್ರತಿಯೊಬ್ಬರೂ ನಮ್ಮನ್ನು ತಪಾಸಣೆಗೆ ಒಳಪಡಿಸಿಕೊಳ್ಳೋಣ. ಹಾಗೆಯೇ ಸಾಮರಸ್ಯದ ಸುಭದ್ರ ಬದುಕು ನಡೆಸೋಣ. ಸಂಶಯ ಬೇಡ’ ಎನ್ನುವುದಾಗಿದೆ.
ಕರ್ನಾಟಕದಲ್ಲಿ ಎರಡೂವರೆ ಲಕ್ಷ ಏಡ್ಸ್ ಸೋಂಕಿತರಿದ್ದಾರೆ ಎನ್ನುವ ಅಧಿಕೃತ ದಾಖಲೆಯನ್ನು ಸರ್ಕಾರ ನೀಡುತ್ತಿದೆ. ದೇಶದ ಐದನೆಯ ಹೆಚ್ಚು ಏಡ್ಸ್ ಸೋಂಕಿತರಿರುವ ರಾಜ್ಯ ಕರ್ನಾಟಕ. ಎಆರ್‌ಟಿ ಸೆಂಟರ್‌ಗಳು, ಕೌನ್ಸಿಲಿಂಗ್‌ಗಳು, ಔಷಧ, ಜೀವನ-ಬದುಕು ಪ್ರೇರೇಪಿಸುವ ಜಾಗೃತಿ ಶಿಬಿರಗಳು ಇಲ್ಲಿ ಸಾಕಷ್ಟು ನಡೆಯುತ್ತಿವೆ. ಎಚ್‌ಐವಿ ಲಸಿಕೆ, ಕೊರೊನಾ ನಿಯಂತ್ರಿಸುವಲ್ಲಿ ಸಾಕಷ್ಟು ಬಳಕೆಯಾಗಿದೆ. ಅಂದರೆ ಏಡ್ಸ್ ಕೂಡ ನಿಯಂತ್ರಣ ಸಾಧ್ಯ. ಮುಖ್ಯವಾಗಿ ಈಗ ಆಗಬೇಕಾಗಿರುವುದು ನೈತಿಕ ಸ್ಥೈರ್ಯ-ಧೈರ್ಯ ಬೆಳೆಸುವುದು. ಕ್ಷಯರೋಗಿಗಳಂತೆಯೇ ಏಡ್ಸ್ ರೋಗಿಗಳಿಗೆ ಕೂಡ ಸರ್ಕಾರ ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯ ಯೋಜನೆಗಳನ್ನು ಕಟ್ಟುನಿಟ್ಟಾಗಿ ಒದಗಿಸಿಕೊಡ ಬೇಕಾಗಿರುವ ಕಾಲಘಟ್ಟವಿದಾಗಿದೆ. ಈ ದಿಸೆಯಲ್ಲಿ ಗಂಭೀರ ಹೆಜ್ಜೆಗಳನ್ನಿರಿಸಿದರೆ ೨೦೩೦ರ ಹೊತ್ತಿಗೆ ಏಡ್ಸ್ ಮುಕ್ತ ಭಾರತದ (ರೆಡ್‌ಫ್ರೀ) ಕನಸು ನನಸಾಗುವುದು ಕಷ್ಟದ ಸಂಗತಿಯೇನೂ ಅಲ್ಲ.