ಹುಬ್ಬಳ್ಳಿ: ಬಿಜೆಪಿಯದ್ದು ಲಜ್ಜೆಗೆಟ್ಟ- ದಪ್ಪ ಚರ್ಮದ ಸರ್ಕಾರ ಎಂದು ಶುಕ್ರವಾರ ಇಲ್ಲಿ ವಾಕ್ ಪ್ರಹಾರ ಮಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮತದಾರರ ಮಾಹಿತಿ ಕಳುವಿನ ಎರಡನೇ ಹಂತದ ಪ್ರಯೋಗಕ್ಕೆ ಒಳಗಿಂದೊಳಗೇ ಸರ್ಕಾರ ಸಿದ್ಧತೆ ನಡೆಸಿತ್ತು ಎಂಬ ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುದೈವವಶಾತ್, ಪ್ರತಿಪಕ್ಷಕ್ಕೆ ಮಾಹಿತಿ ಲಭಿಸಿ ಇದಕ್ಕೆ ತಡೆ ಬಿತ್ತು; ಇಲ್ಲವಾದರೆ ಬಹುದೊಡ್ಡ ಅಪಾಯ ಕರ್ನಾಟಕದ ಜನಕ್ಕೆ ಕಾದಿತ್ತು' ಎಂದು ನುಡಿದರು.
ಬಿಬಿಎಂಪಿ ಹಾಗೂ ವಿಧಾನಸಭೆ ಎರಡೂ ಚುನಾವಣೆಗಳಲ್ಲಿ ಸೋಲು ಖಚಿತ ಎಂಬುದು ಬಿಜೆಪಿಗೆ ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದೆ. ಆದ್ದರಿಂದಲೇ ಮತದಾರರ ಮಾಹಿತಿಗೆ ಕನ್ನ ಹಾಕಿ ಕಳ್ಳ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಇಂತಹ ಗಂಭೀರ ಕೆಲಸವನ್ನು ಕನಿಷ್ಟ ಜವಾಬ್ದಾರಿ ಇರುವವರು ಖಾಸಗಿಯವರಿಗೆ ವಹಿಸುತ್ತಾರೆಯೇ’ ಎಂದು ಸಲೀಂ ಅಹಮದ್ ಸಿಟ್ಟಿನಿಂದ ಪ್ರಶ್ನಿಸಿದರು. ಬೆಂಗಳೂರು ಮತದಾರರ ಯಾದಿ ಪರಿಷ್ಕರಣೆಯಲ್ಲಿ ಅಕ್ರಮ ನಡೆಯುತ್ತಿರಲಿಲ್ಲ ಎಂದಾದರೆ, ವಿಷಯ ಬಯಲಾಗುತ್ತಿದ್ದಂತೆಯೇ ಈ ಖಾಸಗಿ ಕಂಪನಿಯವರು ರಾತ್ರೋರಾತ್ರಿ ಬಾಗಿಲು ಹಾಕಿ ಓಡಿಹೋಗಿದ್ದು ಏಕೆ ಎಂದು ಕೇಳಿದರು.
ಈ ಕಾರ್ಯವನ್ನು ವಹಿಸಿಕೊಡಲಾಗಿದ್ದ ಖಾಸಗಿ ಸಂಸ್ಥೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸೇರಿದೆ. ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಗಳ ಕೈಯಲ್ಲಿದೆ. ಹೀಗಾಗಿ, ನಾವು ಈ ಇಬ್ಬರ ರಾಜೀನಾಮೆ ಮತ್ತು ಇವರ ವಿರುದ್ಧ ಎಫ್‌ಐಆರ್ ದಾಖಲಿಸಲು ಒತ್ತಾಯಿಸಿದ್ದೇವೆ. ಬಿಬಿಎಂಪಿ ಆಯುಕ್ತರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದೇವೆ. ಈ ಸಂಬಂಧ ಶನಿವಾರ ಬೆಂಗಳೂರಿನ ಚುನಾವಣಾ ಆಯೋಗದ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷ ಈವರೆಗೆ ಮೂರು ಆಂತರಿಕ ಸಮೀಕ್ಷೆಗಳನ್ನು ನಡೆಸಿದ್ದು, ಈ ಸಮೀಕ್ಷಾ ವರದಿಗಳು ೧೩೦ ಸ್ಥಾನವನ್ನು ಪಕ್ಷ ಗೆಲ್ಲಲಿದೆ ಎಂದಿವೆ. ಇನ್ನುಳಿದ ಐದು ತಿಂಗಳಲ್ಲಿ ಪಕ್ಷದ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡು ೧೫೦ ಸ್ಥಾನಗಳಲ್ಲಿ ಗೆಲ್ಲುವುದು ನಮ್ಮ ಗುರಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಂಡಾಯ ಇಲ್ಲ. ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತೇವೆ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಒಂದೇ ಬಸ್‌ನಲ್ಲಿ ಚುನಾವಣಾ ಪ್ರಚಾರ ಮಾಡುವರೇ ಎಂಬ ಪ್ರಶ್ನೆಗೆ ಸಲೀಂ ಸ್ಪಷ್ಟ ಉತ್ತರ ನೀಡಲಿಲ್ಲ. ಕಾಂಗ್ರೆಸ್‌ನಲ್ಲಿ ಎರಡು ಬಸ್‌ಗಳಿಲ್ಲ. ನಮ್ಮದು ಒಂದೇ ಬಸ್, ಅದು ಕಾಂಗ್ರೆಸ್ ಬಸ್ ಎಂದಷ್ಟೇ ನುಡಿದರು.